ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದೆ. ಇದೇ ಬರುವ ಮಾರ್ಚ್ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಸಂಬಂಧ ಎಲ್ಲ ತಯಾರಿ ನಡೆಸಿದ್ದು, ಇದೇ ಸಂದರ್ಭದಲ್ಲಿ ಮಂಡಳಿಯು ಸರ್ಕಾರದ ಮೂಲಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿಶೇಷ ಕ್ರಮಕ್ಕೆ ಮುಂದಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲ ವಿಷಯಗಳಲ್ಲೂ 1 ಅಂಕದ 20 ಬಹುಮಾದರಿಯ ಪ್ರಶ್ನೆಗಳು ಇರಲಿವೆ. ಈ ಹಿಂದಿನ ವರ್ಷಗಳಲ್ಲಿ ಈ ಮಾದರಿಯ 5 ಅಥವಾ 6 ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತಿತ್ತು. ಆದರೆ ಈ ಸಲ ಅದನ್ನು ಹೆಚ್ಚಿಸಲಾಗಿದೆ. ಈ 20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು, ಕೆಲವು ಬಿಟ್ಟಸ್ಥಳ ತುಂಬಿರಿ ಮತ್ತು ಹೊಂದಿಸಿ ಬರೆಯಿರಿ ಇತ್ಯಾದಿ ಮಾದರಿಯಲ್ಲಿ ಇರಲಿವೆ. ಈ ಬದಲಾವಣೆ ಹೊರತಾಗಿ ಇನ್ನುಳಿದಂತೆ ಪ್ರಶ್ನೆ ಪತ್ರಿಕೆ ಮಾದರಿಯು ಮೊದಲಿನಂತೆಯೇ ಉಳಿಯುತ್ತದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಹೆಚ್.ಎನ್. ಕೆಎಸ್‌ಇಎಬಿಯ ನಿರ್ದೇಶಕ ಗೋಪಾಲಕೃಷ್ಣ ಹೇಳಿದ್ದಾರೆ.
ಈ ಸಲ 6 ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದಿನಿಂದಲೂ ಪರೀಕ್ಷೆ ಬರೆದವರಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಕಡಿಮೆ ಇದೆ. ಪ್ರತಿ ವರ್ಷ ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 60ಕ್ಕಿಂತ ಮೀರುತ್ತಿಲ್ಲ. ಹೀಗಾಗಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದ ಕೆಲ ರಾಜ್ಯಗಳಲ್ಲಿ ಫಲಿತಾಂಶ ಸುಧಾರಿಸಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿಯೂ ಇಂತದ್ದೊಂದು ಪ್ರಯತ್ನಕ್ಕೆ ಈ ಸಲ ಮುಂದಾಗಲಾಗಿದೆ ಎಂದಿದ್ದಾರೆ.