ಬೆಂಗಳೂರು:ಬೇಸಿಗೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳ ಕೋಟ್೯ ಕೆಲಸದ ಅವಧಿಯನ್ನು ಬದಲಾವಣೆ ಮಾಡಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಹೆಚ್ಚಿದ ತಾಪಮಾನ: ಉತ್ತರ ಕರ್ನಾಟಕ ಭಾಗದ ಕೋರ್ಟ್ ಕೆಲಸದ ಅವಧಿಯಲ್ಲಿ ಬದಲಾವಣೆ - ಹೈಕೋರ್ಟ್ ಅಧಿಸೂಚನೆ
ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಉತ್ತರ ಕರ್ನಾಟಕ ಭಾಗದ ಸಿವಿಲ್ ಮತ್ತು ಕ್ರಿಮಿನಲ್ ಕೋಟ್೯, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯಗಳ ಕೆಲಸದ ಸಮಯ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ 1.30ವರೆಗೆ ಇರಲಿದೆ.
ಕಲಬುರಗಿ ಕಂದಾಯ ವಿಭಾಗದ ವ್ಯಾಪ್ತಿಯ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ ಹಾಗೂ ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಿವಿಲ್ ಮತ್ತು ಕ್ರಿಮಿನಲ್ ಕೋಟ್೯, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯಗಳ ಕೆಲಸದ ಸಮಯ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ 1.30 ಇರಲಿದೆ.
ಅದೇ ರೀತಿ ಕಚೇರಿ ಕೆಲಸದ ಸಮಯ ಬೆಳಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಇರುತ್ತದೆ. ಭೋಜನ ವಿರಾಮ ಬೆಳಗ್ಗೆ 11ರಿಂದ 11.30ರ ತನಕ ಇರಲಿದೆ. ಈ ಕೆಲಸದ ಅವಧಿ ಏಪ್ರಿಲ್ 5ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ (ಪ್ರಭಾರ) ಟಿ.ಜೆ. ಶಿವಶಂಕರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.