ಬೆಂಗಳೂರು: ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ "ದೀವಟಿಗೆ ಸಲಾಂ” “ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಎಂಬ ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನು ನಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂದರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನು ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ “ದೀವಟಿಗೆ ಸಲಾಂ” ಎಂಬ ಪದದ ಬದಲಾಗಿ “ದೀವಟಿಗೆ ನಮಸ್ಕಾರ” ಎಂದು, “ಸಲಾಂ ಆರತಿ” ಎಂಬ ಪದದ ಬದಲಾಗಿ “ಆರತಿ ನಮಸ್ಕಾರ” ಎಂದು ಹಾಗೂ ʼಸಲಾಂ ಮಂಗಳಾರತಿ” ಎಂಬ ಪದದ ಬದಲಾಗಿ “ಮಂಗಳಾರತಿ ನಮಸ್ಕಾರ” ಎಂದು ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಮತ್ತು ಸೇವಾ ಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.