ಬೆಂಗಳೂರು:ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ನಡೆಸುವ ಸಲುವಾಗಿ ನಮ್ಮ ಮೆಟ್ರೋ ವಾಣಿಜ್ಯ ಸೇವೆಯ ಸಮಯದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ಮಾಡುವ ಹಿನ್ನೆಲೆಯಲ್ಲಿ ಆಗಸ್ಟ್ 17 ರಂದು (ಗುರುವಾರ) ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳೆಗ್ಗೆ 5 ರಿಂದ ರಾತ್ರಿ 11 ರವರೆಗೆ ರೈಲು ಸೇವೆಗಳು ಇರಲಿದೆ ಎಂದು ಬಿಎಂಆರ್ಸಿಎಲ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಆಗಸ್ಟ್ 23 ಮತ್ತು 24 ರಂದು ಬೆಳಗ್ಗೆ 7 ಗಂಟೆಯ ನಂತರ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ರೈಲುಗಳು ಸಂಚರಿಸಲಿವೆ. ಈ ಅವಧಿಯಲ್ಲಿ ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ ಯಾವುದೇ ರೈಲು ಸೇವೆ ಇರುವುದಿಲ್ಲ ಮತ್ತು ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಸೇವೆ ಲಭ್ಯವಿರುತ್ತದೆ ಎಂದು ಹೇಳಿದೆ.