ಬೆಂಗಳೂರು :ಇತ್ತೀಚಿನ ಚಂದ್ರಯಾನದ ಯಶಸ್ಸು ಬಾಹ್ಯಾಕಾಶ ಪರಿಶೋಧನೆಯಲ್ಲಿನ ಸಿದ್ಧತೆ ಮತ್ತು ನಿಖರತೆಯ ಮಹತ್ವ ಸಾರಿದೆ. ಈ ಸಾಧನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಹೇಳಿದರು.
ಬಾಹ್ಯಾಕಾಶದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ 2023 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ನಗರದಲ್ಲಿ ಬಾಹ್ಯಾಕಾಶದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ 2023 ಅನ್ನು ಆಯೋಜಿಸಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಚಂದ್ರನ ಮೇಲೆ ಯಶಸ್ವಿಯಾದ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು, ಮಿಷನ್‌ನ ಯಶಸ್ಸಿಗೆ ಕಾರಣವಾದ ನಿಖರವಾದ ಸಿದ್ಧತೆ ಮತ್ತು ಡೇಟಾ- ಚಾಲಿತ ನಿರ್ಧಾರಗಳನ್ನು ಪ್ರಶಂಸಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಕಿರಣ್ ಕುಮಾರ್, ನೀತಿಗಳ ಸುಧಾರಣೆ, ನಾವೀನ್ಯತೆ, ಖಾಸಗಿ ವಲಯದ ಒಳಗೊಳ್ಳುವಿಕೆ ಮತ್ತು ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಮುಂಚೂಣಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಬೆಳವಣಿಗೆಗೆ ಸಿದ್ಧವಾಗಿದೆ. ರಾಷ್ಟ್ರವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಅನ್ವೇಷಣೆ ಮುಂದುವರೆಸುತ್ತಿರುವುದರಿಂದ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಬ್ರಹ್ಮಾಂಡದ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಮುಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಇಸ್ರೋ ಅಭಿವೃದ್ಧಿಪಡಿಸಿದ ಭಾರತದ ದೃಢವಾದ ಸ್ಥಳೀಯ ತಂತ್ರಜ್ಞಾನಗಳು ಮತ್ತು ಉಡಾವಣಾ ಸಾಧನಗಳಿಂದ 2022 ವರ್ಷ ಉಡಾವಣೆಗಳ ಸರಣಿಗೆ ಸಾಕ್ಷಿಯಾಯಿತು. ಈ ಒಂದು ವರ್ಷದಲ್ಲಿ 36 ಒನ್‌ವೆಬ್ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಇದರಿಂದ ಇನ್ನಷ್ಟು ಬಲಿಷ್ಠ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಗುರಿಯನ್ನು ಭಾರತ ಹೊಂದಿದೆ. 2033 ರ ವೇಳೆಗೆ 44 ಶತಕೋಟಿ ಡಾಲರ್ ಬಾಹ್ಯಾಕಾಶ ಆರ್ಥಿಕತೆ ತಲುಪುವ ಗುರಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಅಧ್ಯಕ್ಷ ಡಾ. ಪವನ್ ಕೆ ಗೋಯೆಂಕಾ ಹೇಳಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನ 2023ರ ಉದ್ಘಾಟನಾ ಅಧಿವೇಶನದಲ್ಲಿ ಇತರ ಸ್ಪೀಕರ್‌ಗಳು ಬಾಹ್ಯಾಕಾಶ ಪರಿಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕೆ ರಾಷ್ಟ್ರದ ಬದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಸಿಐಐ ರಾಷ್ಟ್ರೀಯ ಬಾಹ್ಯಾಕಾಶ ಸಮಿತಿಯ ಅಧ್ಯಕ್ಷ ಜಯಂತ್ ಪಾಟೀಲ್, ಆಸ್ಟ್ರೇಲಿಯನ್ ಆಯೋಗದ ಡೆಪ್ಯುಟಿ ಹೈ ಕಮಿಷನರ್ ಸಾರಾ ಸ್ಟೋರಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- ಎರಡು ದಿನಗಳ ಸಮಾವೇಶ: ಎರಡು ದಿನಗಳ ಸಮಾವೇಶದಲ್ಲಿ ತಾಂತ್ರಿಕ, ನೀತಿ ಮತ್ತು ಕಾರ್ಯತಂತ್ರ ಸಂಬಂಧಿತ ವಿಷಯಗಳ ಕುರಿತು 80 ಕ್ಕೂ ಹೆಚ್ಚು ಪ್ರಖ್ಯಾತ ಭಾಷಣಕಾರರು ಮತ್ತು ವಿಜ್ಞಾನಿಗಳು ಮಾತನಾಡಲಿದ್ದಾರೆ. ಜ್ಞಾನ ವಿನಿಮಯ ಮತ್ತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ :ಚಂದ್ರನಲ್ಲಿ ಮಾನವ ವಾಸ ಮಾಡಬಹುದಾದ ವಾತಾವರಣ ಇರಬಹುದು.. ಇಸ್ರೋ ಚಂದ್ರಯಾನ ಮಿಷನ್ಗಳ ಮಾಹಿತಿ: ವಿಜ್ಞಾನಿ ದುವಾರಿ ಮೆಚ್ಚುಗೆ