ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ.. ರಾಜ್ಯಾದ್ಯಂತ ಸಂಭ್ರಮಾಚರಣೆ ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಹಲವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸತೊಡಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಇಸ್ರೋಗೆ ಶುಭಾಶಯ ಕೋರಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿಯೂ ಚಂದ್ರಯಾನ-3ರ ವಿಜಯೋತ್ಸವ ಆಚರಿಸಲಾಯಿತು.
"ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಇಂಥದ್ದೊಂದು ಅಸಾಧಾರಣ ಸಾಧನೆಗೈದ ನಾಡಿನ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ -3 ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಜಿ ಪರಮೇಶ್ವರ್, ಆರ್ ವಿ ದೇಶಪಾಂಡೆ, ಸಚಿವ ಶಿವರಾಜ ತಂಗಡಗಿ, ಈಶ್ವರ್ ಖಂಡ್ರೆ ಅಭಿನಂದಿಸಿದ್ದಾರೆ.
ಈವರೆಗೆ ಯಾವುದೇ ದೇಶವೂ ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ತನ್ನ ವ್ಯೋಮ ನೌಕೆ ಇಳಿಸುವಲ್ಲಿ ಸಾಧಿಸಲಾಗದ “ವಿಕ್ರಮ” ಸಾಧಿಸಿ ಲ್ಯಾಂಡರ್ ಅನ್ನು ಚಂದ್ರಮನ ಮೇಲೆ ಇಳಿಸಿದ ಭಾರತದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮತ್ತು ಇಸ್ರೋಗೆ ಅಭಿನಂದನೆಗಳು ಎಂದು ಹಲವು ಸಚಿವರು ಟ್ವೀಟ್ ಮಾಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ: ಚಂದ್ರಯಾನ ಯಶಸ್ವಿಯಾದ ಹಿನ್ನೆಲೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್ ವೀಕ್ಷಣೆಗೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಮುಂಭಾಗದಲ್ಲಿ ಬೃಹತ್ ಪರದೆ ಅಳವಡಿಸಲಾಗಿತ್ತು. ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕ ಅಶ್ವತ್ಥನಾರಾಯಣ್, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಕುಡುಚಿ ರಾಜೀವ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸೇರಿ ಹಲವು ಮುಖಂಡರು ನೇರ ಪ್ರಸಾರದ ವೀಕ್ಷಣೆ ಮಾಡಿದರು. ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಭಾರತ ಮಾತೆಯ ಪರ ಜಯಘೋಷ ಮೊಳಗಿಸಿದರು.
ರಾಜ್ಯದ ವಿವಿದೆಡೆ ಚಂದ್ರಯಾನ ಯಶಸ್ಸಿಗೆ ಸಂಭ್ರಮಾಚರಣೆ
ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ಬಿಜೆಪಿ ಕಚೇರಿ ಮುಂದೆ ಸಂಭ್ರಮ ಮುಗಿಲು ಮುಟ್ಟಿತ್ತು. ಮುಖಂಡರು, ಕಾರ್ಯಕರ್ತರು, ಚಿಣ್ಣರು ಇಸ್ರೋ ವಿಜ್ಞಾನಿಗಳಿಗೆ, ಪ್ರಧಾನಿ ಮೋದಿಗೆ ಜಯಘೋಷ ಹಾಕಿದರು. ಬಳಿಕ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ, ಭಾರತದ ಮುಕುಟಮಣಿಗೆ ಮತ್ತೊಂದು ವಜ್ರ ಸೇರ್ಪಡೆಯಾಗಿದೆ. ಇದಕ್ಕೆ ಕಾರಣವಾದ ವಿಜ್ಞಾನಿಗಳಿಗೆ, ಒತ್ತಾಸೆಯಾಗಿ ನಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಭಾರತ ಆಧುನಿಕ ವಿಜ್ಞಾನದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವಗುರುವಾಗುವತ್ತ ಸಾಗಿದೆ ಎಂದು ಹೇಳಿದರು.
ರಾಜ್ಯಸಭೆ ಸದಸ್ಯ ಜಗ್ಗೇಶ್ ಮಾತನಾಡಿ, ಈ ಸಫಲತೆ ನಮಗೆ ಸಂತಸದ ದಿನ. ನಾವು ಎಲ್ಲ ಕ್ಷೇತ್ರಗಳಲ್ಲೂ ರಣಬೇಟೆಗಾರರಾಗಿ ಸಾಗಬೇಕು. ಕಳೆದ ಬಾರಿ ಸೋತಾಗ ತಂದೆಯ ಸ್ಥಾನದಲ್ಲಿ ನಿಂತು ಸಾಂತ್ವನ ಹೇಳಿದ್ದವರು ಪ್ರಧಾನಿ ಮೋದಿ. ದೈವಬಲ ಇದ್ದಾಗ ಯಾವ ವಾಮ ಮಾರ್ಗಗಳೂ ಫಲಿಸುವುದಿಲ್ಲ. ಇದರ ಹಿಂದೆ ಕೆಲವರು ಕುಚೇಷ್ಟೆ ಮಾಡಿದ್ದಾರೆ. ದೇಶದ ಜನತೆ ದೇವರಿಗೆ ನಮಸ್ಕರಿಸಿ ಸಫಲತೆಗೆ ಪ್ರಾರ್ಥನೆ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ಚಂದ್ರಯಾನ ಸಫಲವಾಗಿರುವುದು ಸಂತಸದ ವಿಚಾರ. ಇದಕ್ಕೆ ಕಾರಣರಾದ ವಿಜ್ಞಾನಿಗಳಿಗೆ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ನಾಯಕತ್ವ, ಉತ್ತೇಜನ ಬಹಳ ಮುಖ್ಯ ಪಾತ್ರ ವಹಿಸಿದೆ. ಇದು ಇಡೀ ವಿಶ್ವದ ಗಮನ ಸೆಳೆದಿದೆ ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶದ ಪ್ರಜೆ, ಭಾರತಾಂಬೆಯ ಮಕ್ಕಳು ಭಾರತ ಮಾತೆಗೆ ಜೈಕಾರ ಹಾಕುವ ಸಂದರ್ಭ. ಇಂದು ಭಾರತ ಪ್ರತಿ ಹೆಜ್ಜೆಯಲ್ಲೂ ಹೆಮ್ಮೆಯಿಂದ ಸಾಗುತ್ತದೆ ಎಂದು ತಿಳಿಸಿದರು.
ಬಿಎಸ್ವೈ, ಬೊಮ್ಮಾಯಿ ವೀಕ್ಷಣೆ: ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಇಂದು ಮಹತ್ವಾಕಾಂಕ್ಷೆಯ ಚಂದ್ರಯಾನ- 3 ಯೋಜನೆಯ, ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಕಾತರದಿಂದ ವೀಕ್ಷಣೆ ಮಾಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಆರ್ಟಿ ನಗರದ ನಿವಾಸದಲ್ಲಿ ಚಂದ್ರಯಾನ -3 ಸಾಪ್ಟ್ ಲ್ಯಾಂಡಿಂಗ್ ಲೈವ್ ವೀಕ್ಷಿಸಿದರು.
ಇಸ್ರೋಗೆ ಅಭಿನಂದನೆ ಸಲ್ಲಿಸಿದ ಮಾಜಿ ಪ್ರಧಾನಿ ದೇವೇಗೌಡರು : ಚಂದ್ರಯಾನ ಯಶಸ್ಸಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನದ ಯಶಸ್ಸಿಗೆ, ಇಸ್ರೋದ ಸಾಧನೆಗೆ ಚಪ್ಪಾಳೆ ತಟ್ಟುವುದರಲ್ಲಿ ಭಾರತೀಯರೊಂದಿಗೆ ನಾನು ಸೇರುತ್ತೇನೆ. ಇಸ್ರೋ ವಿಶ್ವ ದರ್ಜೆಯ ಸಂಸ್ಥೆಯಾಗಿದೆ. ಇದು ಹಲವು ದಶಕಗಳಿಂದ ನಮಗೆ ಹೆಮ್ಮೆ ತರುವ ಕೆಲಸ ಮಾಡುತ್ತಿದೆ. ಅವರ ಅಮೋಘ ಸಾಧನೆಗಳು ನಮ್ಮನ್ನು ವಿಶ್ವದ ಅಗ್ರಸ್ಥಾನದಲ್ಲಿರಿಸಿವೆ. ದೇವರು ನಮ್ಮ ರಾಷ್ಟ್ರ ಮತ್ತು ನಮ್ಮ ವಿಜ್ಞಾನಿಗಳನ್ನು ಆಶೀರ್ವದಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ: ಚಂದ್ರಯಾನ-3 ಯಶಸ್ವಿಯಾಗಿ ಪೂರೈಸಿ ಭಾರತದ ಬಗ್ಗೆ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ, ನೂರಾ ಇಪ್ಪತ್ತೈದು ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ. ಇಸ್ರೋ ನಮ್ಮ ಹೆಮ್ಮೆ. ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇಸ್ರೋ ಖಗೋಳ ಸಂಶೋಧನೆಗೆ ನಿರ್ಣಾಯಕ ತಿರುವು ಕೊಟ್ಟಿದೆ. ನಮ್ಮ ವಿಜ್ಞಾನಿಗಳ ಈ ಸಾಧನೆಯನ್ನು ಕೇವಲ ಪದಗಳಿಂದ ಬಣ್ಣಿಸಿದರೆ ಸಾಲದು. ಹಗಲಿರುಳು ಶ್ರಮಿಸಿದ ಅವರ ಯಶಸ್ಸನ್ನು, ಅರ್ಪಣಾ ಮನೋಭಾವವನ್ನು ಹೃದಯಪೂರ್ವಕವಾಗಿ ಕೊಂಡಾಡಿ ಗೌರವಿಸೋಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅಮೆರಿಕ, ರಷ್ಯಾ, ಚೀನಾ ನಂತರ ಚಂದ್ರನ ಮೇಲೆ ರೋವರ್ ಇಳಿಸಿದ ಈ ಸಾಧನೆ ಐತಿಹಾಸಿಕ. ಇಸ್ರೋದ ಈ ಪಯಣ ನನಗೆ ರೋಮಾಂಚನ ಉಂಟು ಮಾಡಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ.ಸೋಮನಾಥ್ ಸೇರಿದಂತೆ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಮತ್ತಿತರರಿಗೆ ನನ್ನ ಅಭಿನಂದನೆಗಳು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸಾಫ್ಟ್ ಲ್ಯಾಂಡಿಂಗ್ಗೆ ಅಭಿನಂದನೆ
ಇಸ್ರೋ ಸಾಧನೆಗೆ ಜೈ ಹೋ ಎಂದ ಸಾರ್ವಜನಿಕರು: ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದಲ್ಲಿ ಎಲ್ಇಡಿ ಪರದೆ ಮೂಲಕ ಚಂದ್ರಯಾನ ಲ್ಯಾಂಡಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು. ಸಾಪ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ಜನರು ಸಂಭ್ರಮಾಚರಣೆ ಮಾಡಿದರು. ಹಾವೇರಿ, ದಾವಣಗೆರೆ, ಧಾರವಾಡ ಜಿಲ್ಲೆಯಲ್ಲೂ ಚಂದ್ರಯಾನ ಯಶಸ್ವಿಗೆ ಸಂಭ್ರಮಾಚರಣೆ ನಡೆಯಿತು. ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾವಣಗೆರೆಯ ಜಯದೇವ ವೃತ್ತದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನಿಂದ ಚಂದ್ರಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ :ಚಂದ್ರಯಾನದ ಯಶಸ್ಸು ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವತೆಗೆ ಸೇರಿದ್ದು: ಪ್ರಧಾನಿ ಮೋದಿ