ಬೆಂಗಳೂರು:''ಜವಾಹರಲಾಲ್ ನೆಹರು ತಾರಾಲಯದಲ್ಲಿ ಸಾರ್ವಜನಿಕರೊಂದಿಗೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಗಳನ್ನು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ'' ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜವಾಹರಲಾಲ್ ನೆಹರು ತಾರಾಲಯದಲ್ಲಿ ಇದಕ್ಕಾಗಿ ಬೃಹತ್ ಪರದೆ ಅಳವಡಿಸಲಾಗಿದೆ. ತಜ್ಞರ ವಿವರಣೆ, ವಿಶ್ಲೇಷಣೆಗಳೊಂದಿಗೆ ಸಾರ್ವಜನಿಕರು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಸಾರ್ವಜನಿಕರೊಂದಿಗೆ ನಮ್ಮ ದೇಶದ ಹೆಮ್ಮೆಯಾಗಿರುವ ಇಸ್ರೋದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವುದಾಗಿ ಸಚಿವರು ತಿಳಿಸಿದ್ದು, ಇದೇ ಸಂದರ್ಭದಲ್ಲಿ ಚಂದ್ರನ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯ ಅಷ್ಟೇ ಅಲ್ಲ ದೇಶಾದ್ಯಂತ ಈ ವಿದ್ಯಮಾನ ಕಣ್ತುಂಬಿಕೊಳ್ಳಲು ವಿಜ್ಞಾನಾಸಕ್ತರು ಕಾತರದಿಂದ ಕಾಯುತ್ತಿದ್ದಾರೆ.
ನಿಗದಿಯಂತೆಯೇ ಎಲ್ಲ ಜರುಗಲಿದೆ, ಪ್ಲಾನ್ ಬಿ ಇಲ್ಲವೇ ಇಲ್ಲ- ಇಸ್ರೋ:ವಿಕ್ರಮ್ ಲ್ಯಾಂಡರ್ ನಿಗದಿತ ಅವಧಿಯಲ್ಲೇ ಲ್ಯಾಂಡಿಂಗ್ ಆಗಲಿದೆ. ಚಂದ್ರಯಾನ-3ರ ಯೋಜನೆ ಪ್ರಕಾರವೇ ಎಲ್ಲವೂ ಜರುಗಲಿದೆ. ಇಂದು (ಬುಧವಾರ) ನಿಗದಿಯಾದಂತೆ ವಿಕ್ರಮ್ ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಸಲು ಇಸ್ರೋ ಸನ್ನದ್ಧವಾಗಿದ್ದು, ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವು ಯಾವುದೇ ಪ್ಲಾನ್ ಬಿ ಇಟ್ಟುಕೊಂಡಿಲ್ಲ ಎಂದು ಇಸ್ರೋದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಕ್ರಂ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಯಾವುದೇ ಮುಂದೂಡಿಕೆ ಹಾಗೂ ಪ್ಲಾನ್ ಬಿ ಅನ್ನು ಇಸ್ರೋ ಇಟ್ಟುಕೊಂಡಿಲ್ಲ. ಆರಂಭದಲ್ಲಿ ಯೋಜಿಸಿದಂತೆ ಇಂದು ಸಂಜೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಂದ್ರಯಾನ-3 ಮಿಷನ್ ವಿಶೇಷ:ಚಂದ್ರಯಾನ-3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಹಾಗೂ ನಿರ್ಣಯಕ್ಕೆ ಸಾಕ್ಷಿ. ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಒಳಗೊಂಡಿರುವ LM, ಚಂದ್ರನ ಮೇಲ್ಮೈನಲ್ಲಿ ಅತ್ಯಂತ ಸುರಕ್ಷಿತವಾಗಿ ಹಗುರವಾಗಿ ಇಳಿಯುವ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಇಂದು ಸಂಜೆ 6:04ಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ.
ಇದನ್ನೂ ಓದಿ:ಇಸ್ರೋದಿಂದ ಇಂದು ಮಹತ್ವದ ಕಾರ್ಯಾಚರಣೆ.. ಚಂದ್ರನ ಅಂಗಳದಲ್ಲಿ ತ್ರಿವಿಕ್ರಮನ ಪಾದಸ್ಪರ್ಶ.. ಚಂದ್ರಯಾನ ಕೌತುಕಕ್ಕೆ ಕ್ಷಣಗಣನೆ!