ಬೆಂಗಳೂರು:ಭೂಮಿಗೂ ಚಂದ್ರನಿಗೂ ಅವಿನಾಭಾವ ಸಂಬಂಧ. ಚಂದ್ರನಲ್ಲಿ ಏನಿದೆ ಎಂದು ಹುಡುಕುವ ಪ್ರಯತ್ನ ನಿಲ್ಲಲು ಸಾಧ್ಯವಿಲ್ಲ. ಚಂದ್ರನನ್ನು ಇನ್ನಷ್ಟು ಅರಿಯಬೇಕು ಎಂಬ ಕೌತುಕದಿಂದ ಇಸ್ರೋ ಹೊಸ ಇತಿಹಾಸ ನಿರ್ಮಿಸಿದೆ. ಈ ಇತಿಹಾಸಕ್ಕೀಗ 1 ವರ್ಷ ತುಂಬಿದೆ.
ಭಾರತ ಹೆಮ್ಮೆ ಪಡುವಂತಹ ಯೋಜನೆಯಾದ ಚಂದ್ರಯಾನ - 2 ಯಶಸ್ವಿ ಎನಿಸಿದರು ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಚಂದ್ರನ ಕಕ್ಷೆ ಸೇರಿದ್ದ ಆರ್ಬಿಟರ್ 4,400 ಸುತ್ತನ್ನು ಚಂದ್ರನ ಸುತ್ತ ಯಶಸ್ವಿಯಾಗಿ ಪೂರೈಸಿದೆ.
ಇದಲ್ಲದೇ ಈ ಆರ್ಬಿಟರ್ ಚಂದ್ರನ ಸುತ್ತ ಇನ್ನೂ 7 ವರ್ಷಗಳ ಕಾಲ ಸುತ್ತಲು ಬೇಕಾಗುವಷ್ಟು ಇಂಧನ ಇದೆ ಎಂದು ಇಸ್ರೋ ಮಾಹಿತಿ ನೀಡಿದೆ. 22ನೆ ಜುಲೈ 2019ರಂದು ಚಂದ್ರಯಾನ -2 ಹೊತ್ತ ರಾಕೆಟ್ ಶ್ರೀ ಹರಿಕೋಟಾದಿಂದ ಯಶಸ್ವಿ ಉಡಾವಣೆ ಮಾಡಲಾಗಿತ್ತು. ಬಳಿಕ ಒಂದು ತಿಂಗಳ ಬಳಿಕ ಆರ್ಬಿಟರ್ ಚಂದ್ರನ ಮೇಲ್ಮೈ ತಲುಪಿತ್ತು. ಆದರೆ, ಈ ವೇಳೆ ಲ್ಯಾಂಡರ್ ವಿಕ್ರಮ್ ಸಂಪರ್ಕ ಕಳೆದುಕೊಂಡು ಯೋಜನೆಗೆ ಹಿನ್ನಡೆಯಾಗಿತ್ತು.
ಇದೀಗ ಆರ್ಬಿಟರ್ನ ಎಲ್ಲ ಉಪಕರಣಗಳು ಸ್ಥಿಮಿತದಲ್ಲಿದೆ ಹಾಗೂ ಇನ್ನು 7 ವರ್ಷಕ್ಕೆ ಬೇಕಾಗುವ ಇಂಧನ ಇದೆ ಎಂದು ಇಸ್ರೋ ತಿಳಿಸಿದೆ.