ಬೆಂಗಳೂರು: ಕನ್ನಡಪರ ಸಂಘಟನೆಗಳನ್ನು ರಾಜಕೀಯಕ್ಕೆ ಆಹ್ವಾನಿಸುವ ಮೂಲಕ ಜೆಡಿಎಸ್ ಹೊಸ ಕಾರ್ಯತಂತ್ರ ಹೆಣೆದಿದೆಯೇ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯು ಸರ್ಕಾರ ನಡೆಸುವುದರಲ್ಲಿ ನಿರತವಾಗಿದ್ದರೆ, ಕಾಂಗ್ರೆಸ್ ಒಳಜಗಳದಲ್ಲೇ ಮುಳುಗಿದೆ. ಜೆಡಿಎಸ್ ಮಾತ್ರ ತೆರೆಮರೆಯಲ್ಲಿ ಮುಂಬರುವ ಚುನಾವಣೆಗೆ ತಂತ್ರ ಹೆಣೆಯುತ್ತಿದೆ.
ನಗರದಲ್ಲಿ ಇತ್ತೀಚೆಗೆ ಕನ್ನಡಪರ ಸಂಘಟನೆ ಮುಖಂಡರ ಜೊತೆ ಸಂವಾದ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕನ್ನಡಪರ ಸಂಘಟನೆಗಳ ನಾಯಕರು ಮುಖ್ಯವಾಹಿನಿಗೆ ಬರಬೇಕು ಎಂಬುದು ನನ್ನ ಅಭಿಲಾಷೆ. ನೀವು ಕೆಲ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ. ಚುನಾವಣೆಗೆ ಇನ್ನೂ 14 ತಿಂಗಳ ಕಾಲಾವಕಾಶವಿದೆ. ಈಗಿನಿಂದಲೇ ಕೆಲಸ ಮಾಡಿ ಎಂದು ಕರೆ ನೀಡಿದ್ದರು.
ನಾವೇಕೆ ವಿರೋಧ ಪಕ್ಷದಲ್ಲಿ ಕೂರಬೇಕು? ನಮಗೆ ನಲವತ್ತು ಸ್ಥಾನಗಳನ್ನು ಗೆಲ್ಲುವುದು ಕಷ್ಟವಲ್ಲ. ನಿಮ್ಮೆಲ್ಲರ ಬೆಂಬಲ ಇದ್ದರೆ 125 ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯವಲ್ಲ ಎಂದು ಹೇಳುವ ಮೂಲಕ ಕನ್ನಡಪರ ಸಂಘಟನೆ ಮುಖಂಡರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವ ಬಗ್ಗೆ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ.
2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದೇ ಹೆಚ್ಡಿಕೆ ಅವರ ಯೋಜನೆಯಾಗಿದೆ. ಹಾಗಾಗಿ, ಹೊಸ ದಾಳವನ್ನು ಹೂಡಿರುವ ಅವರು ಇದರಲ್ಲಿ ಯಶಸ್ಸು ಕಾಣುವರೇ? ಎಂಬುದು ಮುಂದಿರುವ ಪ್ರಶ್ನೆಯಾಗಿದೆ.
ಆಪರೇಷನ್ ಜೆಡಿಎಸ್‍ಗೆ ತೆರೆಮರೆಯಲ್ಲಿ ತಯಾರಿ? : ಜೆಡಿಎಸ್‍ನ ಕೆಲವು ಶಾಸಕರು, ಮಾಜಿ ಶಾಸಕರು, ಮುಖಂಡರು ಪಕ್ಷ ತೊರೆಯಲು ಸಿದ್ಧರಾಗಿರುವುದು ತಿಳಿದ ವಿಚಾರವೇ. ಅವರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿರುವ ಬೆನ್ನಲ್ಲೇ 'ಆಪರೇಷನ್ ಜೆಡಿಎಸ್'ಗೆ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಈಗಾಗಲೇ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದು, ಅವರು ಬಹುತೇಕ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ. ಇಬ್ರಾಹಿಂ ಅವರು ಜೆಡಿಎಸ್‍ಗೆ ಸೇರಿದ ನಂತರ ಆಪರೇಷನ್ ಜೆಡಿಎಸ್‍ಗೆ ಚಾಲನೆ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.