ಬೆಂಗಳೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ರಾಜ್ಯ ನಾಯಕತ್ವದಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ.
12 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ತಮ್ಮ ಕ್ಷೇತ್ರಗಳನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಉಪಚುನಾವಣೆ ಸೋಲಿನಲ್ಲಿ ನಾಯಕರ ಹೋರಾಟದ ಕೊರತೆ ಎದ್ದು ಕಂಡಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಿದೆ. ವಲಸೆ ಕಾಂಗ್ರೆಸ್ಸಿಗರ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಇಲ್ಲಿ ಸಿಗುವ ಯಶಸ್ಸು ವಲಸೆ ಕಾಂಗ್ರೆಸ್ಸಿಗರ ಯಶಸ್ಸಾಗಲಿದೆ. ಇದರಿಂದ ಅದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಮೂಲ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ತೆರಳಿರಲಿಲ್ಲ. ಇದು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ
ನಾಯಕರ ನಡುವಿನ ಒಳಜಗಳದ ಕಾರಣ ತೀವ್ರ ಮುಖಭಂಗ ಅನುಭವಿಸಿದ ಕೈ ಪಡೆ ಸಂಘಟಿತರಾಗಿ ಹೋರಾಟ ಮಾಡಲಾಗದೇ ಮಣ್ಣು ಮುಕ್ಕಿದೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ವಿಚಾರದಲ್ಲಿ ಒಳ ಬೇಗುದಿ, ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ಮೂಲ ಕಾಂಗ್ರೆಸ್ಸಿಗರು ಚುನಾವಣೆ ದಿನ ಸಮೀಪಿಸಿದರೂ ಪ್ರಚಾರದ ಕಡೆಗೆ ಮುಖ ಮಾಡದೇ ಇರುವುದರಿಂದಲೇ ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿದರು ಎನ್ನಲಾಗಿದೆ. ಇದೇ ಕಾರಣದಿಂದ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಸೃಷ್ಟಿಸಿದ್ದಾರೆ. ಸಿದ್ದು ವಿರುದ್ಧದ ಮುನಿಸಿನಿಂದಲೇ ಹಿರಿಯರು ಪ್ರಚಾರದಿಂದ ದೂರವೇ ಉಳಿದರು. ಹಿರಿಯರ ಈ ನಿಲುವು ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ರಾಜೀನಾಮೆಗೆ ಕಾರಣವಾಗಿದೆ. ಪ್ರಸ್ತುತ ಇವೆರಡು ಸ್ಥಾನ ಖಾಲಿ ಆದರೆ ಆ ಸ್ಥಾನಕ್ಕೆ ಮೂಲ ಕಾಂಗ್ರೆಸಿಗರನ್ನೇ ಆಯ್ಕೆ ಮಾಡುವುದು ಹಿರಿಯ ನಾಯಕರ ತಂತ್ರ ಎನ್ನಲಾಗಿದೆ.
ಸೋಲಿನ ಕಾರಣ ಸಿದ್ದರಾಮಯ್ಯ:ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಎಲ್ಲ ಸಿದ್ಧತೆಗಳು ನಡೆದಿದೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗರಾದ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಮಾಜಿ ಸಚಿವರಾದ ಹೆಚ್ ಕೆ ಪಾಟೀಲ್ ಇಲ್ಲವೇ ಎಂ ಬಿ ಪಾಟೀಲ್ ಅವರನ್ನು ನೇಮಿಸುವ ಪ್ರಯತ್ನ ಆರಂಭವಾಗಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದು, ಇವರ ತಲೆ ಮೇಲೆ ಸಿಬಿಐ ತೂಗುಕತ್ತಿ ಇರುವ ಹಿನ್ನೆಲೆ ಅವರು ಅವಕಾಶ ವಂಚಿತರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆ ಈ ಸ್ಥಾನಕ್ಕೆ ಈಶ್ವರ್ ಕಂಡ್ರೆ ಆಕಾಂಕ್ಷಿಯಾಗಿದ್ದು, ಕಡೆಯ ಕ್ಷಣಗಳಲ್ಲಿ ರಾಹುಲ್ ಗಾಂಧಿ ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕ ಕೃಷ್ಣಬೈರೇಗೌಡ ಆಯ್ಕೆಯಾದರೂ ಅಚ್ಚರಿಯಲ್ಲ ಎಂಬ ಮಾತುಗಳು ಚಲಾವಣೆಯಲ್ಲಿದೆ.
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಏಕಪಕ್ಷೀಯ ಧೋರಣೆಯಿಂದ ಸೋಲಾಯಿತು ಎಂದು ಹಣೆಪಟ್ಟಿ ಕಟ್ಟಲು ತಂತ್ರ ಹೆಣೆಯಲಾಗುತ್ತಿದ್ದು, ಸಿದ್ದರಾಮಯ್ಯ ಹಾಗೂ ಅವರ ತಂಡವನ್ನೇ ರಾಜ್ಯ ಕಾಂಗ್ರೆಸ್ ಚಟುವಟಿಕೆಯಿಂದ ದೂರವಿಡುವ ಪ್ರಯತ್ನ ಆರಂಭವಾಗಿದೆ. ಆದರೆ, ರಾಜಕೀಯ ಚದುರಂಗದಾಟದಲ್ಲಿ ಸಾಕಷ್ಟು ಪಳಗಿರುವ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಯಾರ ಕೈಗೂ ಸಿಗುವುದಿಲ್ಲ. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂದೆಯೂ ಕೆಲವಷ್ಟು ರಾಜಕೀಯ ಕಾರಣಗಳು ಇವೆ ಎಂದು ಹೇಳಲಾಗ್ತಿದೆ.