ಬೆಂಗಳೂರು: ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ಈ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಪರ, ವಿರೋಧ ಇರುವವರನ್ನು ಒಂದು ವೇದಿಕೆಯಲ್ಲಿ ತಂದು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಕೆಲಸ ಮಾಡಲಾಗುತ್ತದೆ ಎಂದು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳ ಮೀಸಲಾತಿ ಬೇಡಿಕೆ ಇಟ್ಟು ಸಮುದಾಯದ ಕೆಲವರು ಹರಿಹರದಿಂದ ಪಾದಯಾತ್ರೆ ಮಾಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಫ್ರೀಡಂ ಪಾರ್ಕ್ನಲ್ಲಿ ಸಭೆ ಮಾಡಿದ್ದಾರೆ. ಸಿಎಂ ಇಲ್ಲದ ಕಾರಣ ಸರ್ಕಾರದ ಪರ ಸಚಿವ ಸೋಮಣ್ಣ ಹೋಗಿದ್ದರು.
ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕೆಲವರನ್ನ ಕಟ್ಟಿಕೊಂಡು ಬಂದಿದ್ದರು. ಇವರ ಜೊತೆ ಕಾಂಗ್ರೆಸ್ ಅವರೂ ಸೇರಿಕೊಂಡಿದ್ದರು. ಅಲ್ಲಿಂದ ನಡೆದುಕೊಂಡು ಬಂದವರೇ ಬೇರೆ, ಮನವಿ ಕೊಟ್ಟವರೇ ಬೇರೆ, ಇದರಲ್ಲಿ ಷಡ್ಯಂತ್ರ ಮಾಡಿ ಕಾಂಗ್ರೆಸ್ ಎಸ್ಡಿಪಿಐ ಜೊತೆಯಾಗಿದೆ ಎಂದು ಆರೋಪ ಮಾಡಿದರು.
ಪ್ರತಿಭಟನೆ ಮಾಡಿದ್ದು ಉತ್ತಮ ಉದ್ದೇಶದಿಂದ ಆದರೆ, ಏಕಾಏಕಿ ರಸ್ತೆ ಬಂದ್ ಮಾಡುವ ಕೆಲಸ ಮಾಡಿದರು. ಪಾದಯಾತ್ರೆ ಬಂದವರು ಅಲ್ಲಿಯೇ ಕುಳಿತಿದ್ದರು, ಪ್ರತಿಭಟನೆ ಕೆಡಿಸಲು ಬಂದವರನ್ನ ಪೊಲೀಸರು ತಡೆದರು, ಇದರಿಂದ ಕಾಲ್ತುಳಿತ ಆಗಿದೆ. ಅವರನ್ನು ಆಸ್ಪತ್ರೆ ಸೇರಿಸಲಾಗಿದೆ ಎಂದು ನಿನ್ನೆ ಘಟನೆ ಕುರಿತು ವಿವರಣೆ ನೀಡಿದರು.
ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆದರೆ ಒಳಮೀಸಲಾತಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಎಸ್.ಎಂ ಕೃಷ್ಣ ಕಾಲದಲ್ಲಿ ಸದಾಶಿವ ಆಯೋಗ ರಚನೆಯಾಯಿತು. ಅಂದು ಅವರಿಗೆ ಕೂರಲು ಕಚೇರಿ, ವಾಹನ ಕೊಟ್ಟಿರಬಹುದು. ಆದರೆ, ನಮ್ಮ ಸರ್ಕಾರ ಬಂದ ನಂತರ ಯಡಿಯೂರಪ್ಪ, ಸದಾನಂದಗೌಡ ಅವಧಿಯಲ್ಲಿ 12 ಕೋಟಿ ಹಣ ಕೊಟ್ಟು ವ್ಯವಸ್ಥೆ ಮಾಡಲಾಗಿತ್ತು.
ಆದರೆ, ಚುನಾವಣೆಗೆ ಮೂರು ತಿಂಗಳಿದ್ದಾಗ ವರದಿ ಬಂತು, ಚುನಾವಣೆ ಕಾರಣಕ್ಕೆ ವರದಿ ಜಾರಿ ಆಗಲಿಲ್ಲ, ಮುಂದೆ ಬಂದ ಸಿದ್ದರಾಮಯ್ಯ ಅದನ್ನು ನಿರ್ಲಕ್ಷಿಸಿದರು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹಾದೇವಪ್ಪ ವಿರೋಧ ಇದ್ದಾರೆ ಎಂದು ನಿರ್ಲಕ್ಷಿಸಿದರು ಈಗ ನಾವು ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ, ಇದು ಗೋಸುಂಬೆ ರಾಜಕಾರಣವಲ್ಲವೇ? ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಈ ಸರ್ಕಾರದ ಕೊನೆಯ ಅಧಿವೇಶನ: ಜನಪ್ರತಿನಿಧಿಗಳ ಹಾಜರಾತಿ ಕಡ್ಡಾಯ- ಕಾಗೇರಿ