ಬೆಂಗಳೂರು:''ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಕೇಳಿಬಂದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ಕಮೀಷನ್ ಆರೋಪ ಕೇಳಿ ಬಂದಿದ್ದು, ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಬಿಎಂಪಿ ಗುತ್ತಿಗೆದಾರರು ಡಿ.ಕೆ.ಶಿವಕುಮಾರ್ ಬಗ್ಗೆ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಕಮಿಷನ್ ವಿಚಾರವಾಗಿ ದೂರು ಕೊಟ್ಟಿದ್ದಾರೆ ಇದು ಸತ್ಯವಿದೆ. ಗುತ್ತಿಗೆದಾರರ ಹಣ ಬಾಕಿ ಇರುವುದರಿಂದ ಕಾಮಗಾರಿ ಆಗುತ್ತಿಲ್ಲ, ಅರೆಬರೆ ಕಾಮಗಾರಿಗಳು ಆಗಿವೆ. ಕೂಡಲೇ ಗುತ್ತಿಗೆದಾರರ ಹಣ ಬಾಕಿ ಬಿಡುಗಡೆ ಮಾಡಬೇಕು. ಡಿಕೆಶಿ ಕಮಿಷನ್ ಕೇಳಿದ್ದಾರೆ ಅಂತ ಅಜ್ಜಯ್ಯನ ಮೇಲೆ ಆಣೆಗೆ ಗುತ್ತಿಗೆದಾರರು ಸವಾಲು ಹಾಕಿದ್ದಾರೆ. ನೀವು ಸರಿ ಇದ್ದರೆ ಯಾಕೆ ದೇವಸ್ಥಾನಕ್ಕೆ ಹೋಗ್ತಾ ಇಲ್ಲ. ಹಾಗಾದರೆ ಗುತ್ತಿಗೆದಾರರ ಕಮಿಷನ್ ಆರೋಪ ಸರಿಯಾಗಿದೆ. ಡಿಸಿಎಂ ಡಿಕೆಶಿ ಕಮಿಷನ್ ಕೇಳಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಗರಂ:''ಸಚಿವ ಚಲುವರಾಯಸ್ವಾಮಿ ವಿರುದ್ಧ ಬರೆದ ಪತ್ರ ನಕಲಿ ಅಂತಿದ್ದಾರೆ. ಪತ್ರ ನಕಲಿ ಇದ್ದರೂ ಕೂಡ ವಿಷಯ ಅಸಲಿ ಇದೆ. ಬಿ.ಆರ್.ಪಾಟೀಲ್ ಹಾಗೂ ಇತರ ಹಿರಿಯ ಶಾಸಕರು ಆರೋಪ ಮಾಡಿದ್ದರು. ಸಚಿವರ ಕೈಗೆ ಸಿಗಲ್ಲ ಅಂತ ಆರೋಪ ಮಾಡಿದ್ದು ಮಾತ್ರವಲ್ಲ, ಮಧ್ಯವರ್ತಿಗಳ ಮೂಲಕ ಹಣ ಕೇಳುತ್ತಿದ್ದಾರೆ ಅಂತ ಆರೋಪಿಸಿದ್ದರು. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದಿದ್ದರು. ಮತ್ತೊಂದು ಕಡೆ ಬೆಲೆ ಏರಿಕೆ ಆಗುತ್ತಿದೆ. ತೆರಿಗೆ ಹೆಚ್ಚಿಸುತ್ತಿದ್ದಾರೆ. ಎಸ್ಸಿಎಸ್ಟಿ, ಒಬಿಸಿ, ಕೂಲಿಕಾರ್ಮಿಕರು ಜೀವನ ನಡೆಸುವುದೇ ದುಸ್ತರವಾಗಿದೆ. ಈ ಸರ್ಕಾರ ಬರೀ ಗ್ಯಾರಂಟಿ ಧ್ಯಾನ ಮಾಡುತ್ತಿದೆ. ಸಂಪೂರ್ಣವಾಗಿ ಅಭಿವೃದ್ಧಿ ಕಡೆಗಣಿಸಿದೆ. ಕೂಡಲೇ ಸಿಎಂ ಮಧ್ಯಪ್ರವೇಶ ಮಾಡಬೇಕು. ಬಿಬಿಎಂಪಿ ಗುತ್ತಿಗೆದಾರರು ಸತ್ಯ ಹೇಳಿದ್ದಾರೆ. ಬಿ.ಆರ್.ಪಾಟೀಲ್ ಇತರ ಶಾಸಕರು ನಿಜ ಹೇಳಿದ್ದಾರೆ. ಚೆಲುವರಾಯಸ್ವಾಮಿ ವಿಚಾರದಲ್ಲಿಯೂ ಸತ್ಯವೇ ಹೇಳಿದ್ದಾರೆ. ಇದು ಅಭಿವೃದ್ಧಿ ಮಾಡದ, ಭ್ರಷ್ಟ ಸರ್ಕಾರ ಎಂದು ಜನ ಮಾತನಾಡುತ್ತಿದ್ದಾರೆ'' ಎಂದರು.