ಬೆಂಗಳೂರು :ಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಕರುನಾಡಲ್ಲಿ ಅಭೂತಪೂರ್ವ ಜಯಭೇರಿ ಭಾರಿಸಿದೆ. 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿಯಲಿದೆ. ಆದರೆ ಇದೀಗ ರಾಜ್ಯದ ಜನರ ಚಿತ್ತ ಕಾಂಗ್ರೆಸ್ ಘೋಷಿಸಿರುವ ಉಚಿತಗಳ ಭರವಸೆಯ ಜಾರಿ ಮೇಲಿದೆ. ಉಚಿತ ಭರವಸೆಗಳ ಅನುಷ್ಠಾನಕ್ಕೆ ಕೆಲ ಸವಾಲುಗಳೂ ಇವೆ.
ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುವಾಗಿ ಕಾಂಗ್ರೆಸ್ ನ ಗೆಲುವಿನ ಪತಾಕೆ ಹಾರಿಸಲು ನೆರವಾಗಿದ್ದು ಭರವಸೆಗಳ ಗ್ಯಾರಂಟಿ ಕಾರ್ಡ್. ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್ ರಾಜ್ಯದ ಜನರ ಮನಮುಟ್ಟಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಮೂಡುವಂತಾಗಿದೆ.
ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಐದು ಗ್ಯಾರಂಟಿ ಕಾರ್ಡ್ ಗಳು ಕಾಂಗ್ರೆಸ್ ನ್ನು ಈ ಬಾರಿ ಅಭೂತಪೂರ್ವ ವಿಜಯದ ಗಡಿ ಮುಟ್ಟಿಸುವಂತೆ ಮಾಡಿದೆ. ಆದರೆ, ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹತ್ತಾರು ಸವಾಲುಗಳಿವೆ.
ಗ್ಯಾರಂಟಿಗಳಿಗೆ ಎದುರಾಗುವ ಸವಾಲುಗಳೇನು? :ಐದೂ ಭರವಸೆಗಳು ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಜಾರಿಗೆ ಬರಲಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲ ಭರವಸೆಗಳಿಗೆ ಅಂಕಿತ ಹಾಕಲಾಗುವುದು ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 40,000 ಕೋಟಿ ರೂ. ಬೇಕಾಗಲಿದ್ದು, ಇದು ರಾಜ್ಯ ಬಜೆಟ್ ಮೊತ್ತದ ಕೇವಲ 15% ಆಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಆದರೆ, ಅಸಲಿಗೆ ಕಾಂಗ್ರೆಸ್ ಘೋಷಿಸಿದಂತೆ ರಾಜ್ಯದ ಎಲ್ಲರಿಗೂ ಈ ಯೋಜನೆಗಳನ್ನು ಅನ್ವಯಿಸಿದರೆ ಅಂದಾಜು ಮೊತ್ತ 60,000 ಕೋಟಿ ರೂ. ದಾಟುವ ಸಾಧ್ಯತೆ ಇದೆ.
ಮಿತಿ ಮೀರಿದ ರಾಜ್ಯದ ಬದ್ಧ ವೆಚ್ಚ :ರಾಜ್ಯದ ಆದಾಯ ಸಂಗ್ರಹದಲ್ಲಿ ಶೇ. 80-90ರಷ್ಟು ಮೊತ್ತ ನೌಕರರ ವೇತನ, ಪಿಂಚಣಿ, ಆಡಳಿತ ವೆಚ್ಚ, ಸಹಾಯಧನಗಳು ಸೇರಿದಂತೆ ಬದ್ಧ ವೆಚ್ಚಕ್ಕೆ ತಗುಲುತ್ತದೆ. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಅನುಷ್ಠಾನಕ್ಕೆ ಮಿತಿ ಮೀರಿದ ಬದ್ಧ ವೆಚ್ಚವೇ ದೊಡ್ಡ ತಲೆನೋವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟು ಬದ್ಧ ವೆಚ್ಚ ಸುಮಾರು 94,699 ಕೋಟಿ ರೂ. ಆಗಿತ್ತು. ಇದರ ಜೊತೆಗೆ ಸುಮಾರು 30,000 ಕೋಟಿ ರೂ.ವನ್ನು ಸಾಲದ ಮೇಲಿನ ಬಡ್ಡಿ ಪಾವತಿಗೆ ವೆಚ್ಚ ಮಾಡಲಾಗಿದೆ.
ಬೊಮ್ಮಾಯಿ ಸರ್ಕಾರ 2023-24ರ ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು. 2022-23ರ ಸರ್ಕಾರದ ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ರಾಜ್ಯದ ಹಣಕಾಸಿನಲ್ಲಿ ಆದಾಯ ಕೊರತೆಯ ಪರಿಸ್ಥಿತಿ ಇರುವುದರಿಂದ ಸಹಾಯಧನಗಳ ವೆಚ್ಚ ಕಡಿತ ಮಾಡಬೇಕು. ಕೇವಲ ಬಡವರಿಗೆ ಮಾತ್ರ ಸಹಾಯಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಈ ಮಧ್ಯೆ ಕಾಂಗ್ರೆಸ್ ನ ಬೃಹತ್ ಮೊತ್ತದ ಗ್ಯಾರಂಟಿಗಳನ್ನು ಜಾರಿ ಮಾಡುವುದು ರಾಜ್ಯದ ಬೊಕ್ಕಸದ ಸ್ಥಿತಿಯನ್ನು ಏರುಪೇರು ಮಾಡಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ವಿತ್ತೀಯ ಕೊರತೆಯ ಭೀತಿ :ಕೋವಿಡ್ ಲಾಕ್ ಡೌನ್ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ಕ್ಷೀಣವಾಗಿದ್ದ ರಾಜ್ಯದ ಆದಾಯ ಇದೀಗ ಬಹುತೇಕ ಯಥಾಸ್ಥಿತಿಗೆ ಮರಳಿದೆ. ಉತ್ತಮ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ಬೊಮ್ಮಾಯಿ ಸರ್ಕಾರ ಮಂಡಿಸಿದ ಕೊನೆಯ 2023-24 ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು.
ಬಿಜೆಪಿ ಸರ್ಕಾರ 2023-24ಸಾಲಿಗೆ 3,09,182 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಅದರಂತೆ 402 ಕೋಟಿ ರೂ.ನ ಅಲ್ಪ ಮತದ ಉಳಿತಾಯ ಬಜೆಟ್ ಮಂಡಿಸಿದ್ದರು. ಕೋವಿಡ್ ನಿಂದ ಸತತ ಎರಡು ವರ್ಷ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಆದರೆ ಆದಾಯ ಗುರಿ ಮೀರಿ ಸಂಗ್ರಹವಾಗುತ್ತಿರುವ ಕಾರಣ 2023-24 ಸಾಲಿನ ಉಳಿತಾಯದ ಬಜೆಟ್ ಮಂಡಿಸಿದ್ದರು.