ಬೆಂಗಳೂರು: ಕೊರೊನಾ ಸೋಂಕಿನ ನಂತರ ಅನಿವಾಸಿ ಭಾರತೀಯರಿಂದ ಅಪಾರ್ಟ್ಮೆಂಟ್, ಸೈಟ್ ಹಾಗೂ ಮನೆ ಖರೀದಿಗೆ ಆಸಕ್ತಿ ಹೆಚ್ಚಾಗುತ್ತಿದೆ ಎಂದು ಬೆಂಗಳೂರು ಕ್ರೆಡಾಯ್ ಘಟಕದ ಅಧ್ಯಕ್ಷ ಸುರೇಶ್ ಹರಿ ತಿಳಿಸಿದ್ದಾರೆ.
ಸ್ವಂತ ಊರಿನಲ್ಲಿ ಏನಾದರೂ ಹೂಡಿಕೆ ಮಾಡಿದರೆ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಒಂದು ನೆಲೆ ಹಾಗೂ ಸ್ಥಿರ ಆದಾಯ ಇದ್ದರೆ ಆರ್ಥಿಕವಾಗಿ ಸದೃಢವಾಗಬಹುದು ಎಂಬುದು ಎನ್ಆರ್ಐಗಳ ಯೋಜನೆ. ಇದಕ್ಕಾಗಿ ನಗರದಲ್ಲಿನ ಭೂಮಿ ಖರೀದಿಗೆ ಆಸಕ್ತಿ ವಹಿಸಿದ್ದಾರೆ ಎಂದಿದ್ದಾರೆ. ಆದರೆ ಇದೇ ಸಮಯವನ್ನು ದುರುಪಯೋಗ ಪಡಿಸಿಕೊಳ್ಳಲು ರಿಯಲ್ ಎಸ್ಟೇಟ್ ಹೆಸರಿನ ವಂಚಕರು ಕಾದಿರುತ್ತಾರೆ. ಆದ್ದರಿಂದ ಇಂತಹ ಸಮಯದಲ್ಲಿ ಪ್ರತಿಯೊಬ್ಬರು ಜಾಗೃತರಾಗಿರಬೇಕು ಎಂದಿದ್ದಾರೆ ಸುರೇಶ್ ಹರಿ.
ಎನ್ಆರ್ಐಗಳಿಗೆ ಬೆಂಗಳೂರು ಕ್ರೆಡಾಯ್ ಘಟಕದ ಅಧ್ಯಕ್ಷ ಸುರೇಶ್ ಹರಿ ಸಲಹೆ ಆನ್ಲೈನ್ನಲ್ಲಿಯೇ ಈಗ ಬಹುತೇಕ ವ್ಯವಹಾರಗಳು ನಡೆಯುತ್ತಿವೆ. ಖರೀದಿ ಮಾಡುವ ಮುನ್ನ ಸಂಸ್ಥೆಯ ಬಗ್ಗೆ ಪರಿಶೀಲಿಸಬೇಕು, ಸೈಟ್, ಮನೆ ಹಾಗೂ ಇನ್ನಿತರೆ ರಿಯಲ್ ಎಸ್ಟೇಟ್ ಜಾಗಗಳ ಮಾರಾಟದ ಜಾಹೀರಾತು ನೋಡಿದ ತಕ್ಷಣ ಖರೀದಿಸಬಾರದು. ವಕೀಲರು ಅಥವಾ ಇನ್ನಿತರೆ ರಿಯಲ್ ಎಸ್ಟೇಟ್ ಸಂಘ ಸಂಸ್ಥೆಗಳ ಸಹಾಯ ಪಡೆಯಬೇಕು. ರಿಯಲ್ ಎಸ್ಟೇಟ್ ಏಜೆನ್ಸಿ ಬಳಿ ವ್ಯವಹರಿಸುವ ಮುನ್ನ ಸಂಸ್ಥೆಯ ಮಾನ್ಯತೆ ಬಗ್ಗೆ ತಿಳಿದಿರಬೇಕು ಎಂದು ಸುರೇಶ್ ಹರಿ ಸಲಹೆ ನೀಡಿದ್ದಾರೆ.
ಪ್ರತಿನಿತ್ಯ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನಿವಾಸಿ ಭಾರತೀಯರ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯಲ್ಲಿ ಮೋಸ ಮಾಡುವ ಕೇಸ್ಗಳು ಹೆಚ್ಚಾಗಬಹುದು. ನಿವೇಶನ ಖರೀದಿಗೂ ಮುನ್ನ ಸೂಕ್ತ ಮುಂಜಾಗ್ರತೆ ಕೈಗೊಂಡರೆ ಮೋಸಕ್ಕೆ ಒಳಗಾಗುವುದರಿಂದ ಪಾರಾಗಬಹುದು ಎಂದಿದ್ದಾರೆ.