ಕರ್ನಾಟಕ

karnataka

ETV Bharat / state

ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು: ಪ್ರಬಲ ಖಾತೆಗೆ ಪಟ್ಟು ಹಿಡಿದಿರುವವರಾರು? - challenge to the CM BSY

ಪ್ರಮುಖ ಖಾತೆಗಳನ್ನು ಈಗಾಗಲೇ ಸಚಿವರಿಗೆ ಹಂಚಿಕೆ ಮಾಡಲಾಗಿದ್ದು ಅವುಗಳನ್ನು ಹಿಂದಕ್ಕೆ ಪಡೆದು ಹೊಸ ಸಚಿವರ ಅಪೇಕ್ಷೆಗೆ ತಕ್ಕಂತೆ ಹಂಚಿಕೆ ಮಾಡುವುದು ಸಂಪುಟ ವಿಸ್ತರಣೆ ಮಾಡಿದಷ್ಟೇ ಸಿಎಂಗೆ ಪ್ರಯಾಸದಾಯಕವಾಗಿದೆ.

challenge to the CM about minister post sharing
ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು

By

Published : Jan 14, 2021, 5:50 AM IST

ಬೆಂಗಳೂರು: ಹಲವು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಲ್ಲಿ ಹಿರಿಯರಾದ ಉಮೇಶ ಕತ್ತಿ , ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಎಂ ಟಿ ಬಿ ನಾಗರಾಜ್ , ಸಿಪಿ ಯೋಗೇಶ್ವರ್ ತಮ್ಮ ರಾಜಕೀಯ ಹಿರಿತನಕ್ಕೆ ಅನುಗುಣವಾಗಿ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆನ್ನುವುದು ಮುಖ್ಯಮಂತ್ರಿಗಳಿಗೆ ಇಕ್ಕಟ್ಟನ್ನು ತಂದೊಟ್ಟಿದೆ. ಪ್ರಮುಖ ಖಾತೆಗಳನ್ನು ಈಗಾಗಲೇ ಸಚಿವರಿಗೆ ಹಂಚಿಕೆ ಮಾಡಲಾಗಿದ್ದು ಅವುಗಳನ್ನು ಹಿಂದಕ್ಕೆ ಪಡೆದು ಹೊಸ ಸಚಿವರ ಅಪೇಕ್ಷೆಗೆ ತಕ್ಕಂತೆ ಹಂಚಿಕೆ ಮಾಡುವುದು ಸಂಪುಟ ವಿಸ್ತರಣೆ ಮಾಡಿದಷ್ಟೇ ಪ್ರಯಾಸದಾಯಕವಾಗಿದೆ.

ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು

8 ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿತನ ಹೊಂದಿರುವ ಉಮೇಶ ಕತ್ತಿ, ಇಂಧನ ಅಥವಾ ಲೋಕೋಪಯೋಗಿ ಖಾತೆಗೆ ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಸದ್ಯ ಇಂಧನ ಖಾತೆ ಮುಖ್ಯಮಂತ್ರಿಗಳ ಬಳಿಯಲ್ಲಿದೆ. ಹೆಚ್ಚಿನ ಸಚಿವರು ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದರಿಂದ ಯಾರಿಗೂ ನೀಡದೆ ಸಿಎಂ ತಮ್ಮ ಬಳಿಯೇ ಇಟ್ಟು ಕೊಂಡಿದ್ದಾರೆ. ಇನ್ನು ಲೋಕೋಪಯೋಗಿ ಇಲಾಖೆ ಉಪ ಮುಖ್ಯಮಂತ್ರಿಗಳಾದ ಹಿರಿಯ ಸಚಿವ ಗೋವಿಂದ ಕಾರಜೋಳ ಅವರ ಬಳಿ ಇದ್ದು ಅದನ್ನು ಹಿಂದಕ್ಕೆ ಪಡೆದು ಉಮೇಶ ಕತ್ತಿಯವರಿಗೆ ಹಂಚಿಕೆ ಮಾಡುವುದು ಅಷ್ಟು ಸುಲಭವಲ್ಲ .

ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು

ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನೂತನ ಸಚಿವ ಅರವಿಂದ ಲಿಂಬಾವಳಿ ಈ ಹಿಂದೆ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದವರು. ಅವರ ಹಿರಿತನಕ್ಕೆ ಉತ್ತಮ ಖಾತೆ ನೀಡುವುದು ಸಹ ಕಷ್ಟಕರವಾಗಿದೆ. ಆರೋಗ್ಯ ಖಾತೆಯನ್ನು ಡಾ. ಸುದಾಕರ್ ಹೊಂದಿದ್ದು ಕೋವಿಡ್ ಹಿನ್ನೆಲೆಯಲ್ಲಿ ಈ ಖಾತೆಯನ್ನು ಬಿಟ್ಟುಕೊಡುವ ಮನಸ್ಥಿತಿಯನ್ನು ಅವರು ತೋರಿಸುತ್ತಿಲ್ಲ. ಅರವಿಂದ ಲಿಂಬಾವಳಿ ಸಹ ತಮಗೆ ಇಂಧನ, ಬೆಂಗಳೂರು ಅಭಿವೃದ್ಧಿ ಇಲಾಖೆ ನೀಡುವಂತೆ ಮನವಿ ಮಾಡಿದ್ದರೆಂದು ತಿಳಿದುಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡುವ ಬಗ್ಗೆ ಸಿಎಂ ಚಿಂತನೆ ಇದೆಯೆಂದು ಹೇಳಲಾಗುತ್ತಿದೆ.

ನೂತನ ಸಚಿವ ಮುರುಗೇಶ ನಿರಾಣಿ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಬೃಹತ್ ಕೈಗಾರಿಕೆ ಮಂತ್ರಿಯಾಗಿದ್ದರು. ಈ ಬಾರಿಯೂ ಕೈಗಾರಿಕೆ ಖಾತೆಗೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಕೈಗಾರಿಕೆ ಖಾತೆಯು ಹಿರಿಯ ಮುಖಂಡರಾದ ಜಗದೀಶ ಶೆಟ್ಟರ್ ಅವರ ಬಳಿಯಿದ್ದು ಅವರಿಂದ ಖಾತೆ ವಾಪಾಸ್ಸು ಪಡೆದು ನಿರಾಣಿಯವರಿಗೆ ಕೈಗಾರಿಕೆ ಖಾತೆ ನೀಡುವುದು ಸುಲಭದ ಮಾತಲ್ಲ.

ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು

ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ಬರಲು ತಮ್ಮದೇ ಆದ ಕಾಣಿಕೆ ನೀಡಿದ ಹಿರಿಯ ಶಾಸಕ ಎಂ ಟಿ ಬಿ ನಾಗರಾಜ್ ಸಹ ಉತ್ತಮ ಖಾತೆಗೆ ಪಟ್ಟು ಹಿಡಿದಿದ್ದಾರೆಂದು ತಿಳಿದುಬಂದಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಂಟಿಬಿ ವಸತಿ ಖಾತೆ ಸಚಿವರಾಗಿದ್ದರು. ಬಿಜೆಪಿ ಹಿರಿಯ ಮುಖಂಡ ವಿ. ಸೋಮಣ್ಣ ಈಗ ವಸತಿ ಸಚಿವರಾಗಿದ್ದು, ಅವರ ಕಡೆಯಿಂದ ವಸತಿ ಖಾತೆ ಪಡೆದು ಎಂ ಟಿ ಬಿ ನಾಗರಾಜ್ ಅವರಿಗೆ ನೀಡುವುದು ಅಂದುಕೊಂಡಷ್ಟು ಸಲೀಸಲ್ಲ.

ಹೊಸ ಸಚಿವರಾದ ಆರ್ ಶಂಕರ್ , ಎಸ್ ಅಂಗಾರ, ಸಿ ಪಿ ಯೋಗೇಶ್ವರ್ ಅವರಿಗೆ ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳಿಗೆ ಅಷ್ಟು ತೊಂದರೆಯಾಗದು. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ, ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ , ಸಣ್ಣ ನೀರಾವರಿ, ಐಟಿ ಬಿಟಿ ಸೇರಿದಂತೆ ಕಡಿಮೆ ಮಹತ್ವದ ಇಲಾಖೆಗಳು ಹೆಚ್ಚುವರಿಯಾಗಿ ಹಾಲಿ ಸಚಿವರ ಬಳಿಯಿದ್ದು, ಅವನ್ನ ಬಿಟ್ಟುಕೊಡಲು ಯಾವ ಸಚಿವರ ತಕರಾರು ಇಲ್ಲವೆನ್ನಲಾಗಿದೆ .

ಖಾತೆಗಳ ಮರು ಹಂಚಿಕೆ ಸಾಧ್ಯತೆ ಪರಿಶೀಲನೆ ...?

ಉತ್ತಮ ಖಾತೆಗಳಿಗೆ ನೂತನ ಸಚಿವರು ಮತ್ತು ಹಾಲಿ ಸಚಿವರಿಂದ ಬೇಡಿಕೆ ಇರುವುದರಿಂದ ಈಗಿರುವ ಖಾತೆಗಳ ಮರು ಹಂಚಿಕೆ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬಜೆಟ್ ಮಂಡನೆ ಹತ್ತಿರವಿರುವಾಗ ಖಾತೆಗಳ ಮರು ಹಂಚಿಕೆ ಮಾಡಿದರೆ ಉತ್ತಮವೇ ಎನ್ನುವ ಪ್ರಶ್ನೆ ಸಹ ಸಿಎಂ ಅವರನ್ನ ಕಾಡತೊಡಗಿದೆ ಎಂದು ಹೇಳಲಾಗುತ್ತಿದೆ.

ಖಾತೆಯನ್ನು ಸಮರ್ಥವಾಗಿ ನಿರ್ವಹಿಸದ ಸಚಿವರಿಂದ ಪ್ರಮುಖ ಖಾತೆ ಹಿಂದಕ್ಕೆ ಪಡೆದು ದಕ್ಷತೆಯಿಂದ, ಕ್ರಿಯಾಶೀಲರಾಗಿ ಕೆಲಸ ಮಾಡುವ ಮಂತ್ರಿಗಳಿಗೆ ಉತ್ತಮ ಖಾತೆ ನೀಡುವ ಆಲೋಚನೆಯೂ ಮುಖ್ಯಮಂತ್ರಿಗಳಿಗಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details