ಬೆಂಗಳೂರು: ಕೊರೊನಾ ಆತಂಕದ ನಡುವೆ ನಗರದಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ.
ಬ್ಲ್ಯಾಕ್ ಫಂಗಸ್, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಅಧಿಕ ಸ್ಟಿರಾಯ್ಡ್ ಬಳಸುವುದರಿಂದ ಕೂಡ ದಾಳಿ ಮಾಡುತ್ತಿದ್ದು, ಕೋವಿಡ್ಗೆ ಒಳಗಾಗಿ ಗುಣಮುಖರಾದ ಮಧುಮೇಹ ರೋಗಿಗಳಲ್ಲಿ ಇದು ಕಂಡು ಬಂದಿದೆ. ಮೂಗಿನ ಮೂಲಕ ಈ ಫಂಗಲ್ ದೇಹ ಸೇರುತ್ತದೆ. ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಸಾಧ್ಯತೆ: ಡಾ.ಸುಧಾಕರ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹೊಸ ರೋಗಕ್ಕೆ ತಿಲಾಂಜಲಿ ಹಾಡಲು ಸರ್ಕಾರ ಮುಂದಾಗಿದ್ದು, ವಿಶೇಷ ಸಮಿತಿ ರಚನೆಗೆ ಯೋಜಿಸಿದೆ ಎಂದರು. ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿರುವ ಹಿನ್ನೆಲೆ, ನಾಳೆ ನೇತ್ರ ತಜ್ಞರ ಜೊತೆ ಚರ್ಚೆ ಮಾಡಲಿದ್ದೇವೆ. ಖ್ಯಾತ ತಜ್ಞರನ್ನು ಸೇರಿಸಿ ಒಂದು ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ನಾಳೆಯಿಂದ ಪ್ರಾಯೋಗಿಕವಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಈ ಕಾಯಿಲೆಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲಾ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪ್ರಾರಂಭಿಸಲಾಗುವುದು. ಸತತ 7ವಾರಗಳ ಚಿಕಿತ್ಸೆ ಇದಕ್ಕೆ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿಗೆ 2-3 ಲಕ್ಷ ಖರ್ಚು ಆಗುತ್ತದೆ. ಉಚಿತವಾಗಿ ಚಿಕಿತ್ಸೆ ಕೊಡಿಸಲು ಸಿಎಂ ಯಡಿಯೂರಪ್ಪರ ಜೊತೆ ಇಂದೇ ಮಾತನಾಡಲಾಗುವುದು. ಸಮಸ್ಯೆ ಇದ್ದ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.
ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇಡೀ ದೇಶದಲ್ಲೇ ಈ ರೋಗಕ್ಕೆ ಔಷಧಿ ಕೊರತೆ ಇದೆ. ಈಗಾಗಲೇ 20 ಸಾವಿರ ವೈಲ್ಸ್ ಬೇಕು ಅಂತ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಕೇಂದ್ರ ಸಚಿವ ಸದಾನಂದ ಗೌಡರ ಜೊತೆ ಸಂಪರ್ಕದಲ್ಲಿದ್ದೇನೆ. ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡ್ತೀವಿ. ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಹರಡುವಿಕೆ ನಿಖರ ಅಂಕಿ ಅಂಶವಿಲ್ಲ :ರಾಜ್ಯದಲ್ಲಿ ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ ಅನ್ನೋ ಮಾಹಿತಿ ಇಲ್ಲ. ಎಷ್ಟು ಸಾವಾಗಿದೆ ಅಂತ ನಿಖರವಾದ ಮಾಹಿತಿ ಇಲ್ಲ. ಯಾಕೆಂದರೆ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಹೀಗಾಗಿ ಮಾಹಿತಿ ಲಭ್ಯವಿಲ್ಲ, ಇದಕ್ಕಾಗಿ ನಾವು ತಜ್ಞರ ಸಮಿತಿ ರಚನೆ ಮಾಡಲಿದದ್ದೇವೆ. ಅಂಕಿ-ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ನೀಡುತ್ತೆ ಸಚಿವ ಸುಧಾಕರ್ ಮಾಹಿತಿ ನೀಡಿದರು.