ಬೆಂಗಳೂರು: "ರಾಜ್ಯದಲ್ಲಿ ಸಿಎಂ ನೇತೃತ್ವದ ಸಿಂಡಿಕೇಟ್ ಸರ್ಕಾರ, ಡಿಸಿಎಂ ನೇತೃತ್ವದ ಇಂಡಿಕೇಟ್ ಸರ್ಕಾರವಿದ್ದು, ಇಬ್ಬರ ನೇತೃತ್ವದಲ್ಲಿ ಸಚಿವ ಸಂಪುಟ ಸುಲಿಗೆಗಿಳಿದಿದೆ" ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್ನ ಲೂಟಿ ಕಾರ್ಯಕ್ರಮ ಮುಂದುವರಿದಿದೆ" ಎಂದು ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಎರಡು ಗುಂಪುಗಳಿವೆ. ಪಕ್ಷದಲ್ಲಿ ಮಾತ್ರ ಅಲ್ಲ, ಸರ್ಕಾರದಲ್ಲೂ ಎರಡು ಗುಂಪುಗಳಿವೆ. ಒಂದು ಇಂಡಿಕೇಟ್ ಸರ್ಕಾರ ಮತ್ತೊಂದು ಸಿಂಡಿಕೇಟ್ ಸರ್ಕಾರ, ಇಂಡಿಕೇಟ್ ಸರ್ಕಾರ ಡಿಸಿಎಂದು, ಸಿಂಡಿಕೇಟ್ ಸರ್ಕಾರ ಸಿದ್ದರಾಮಯ್ಯರದ್ದು. ಸುಲಿಗೆಯ ಪೈಪೋಟಿಯಲ್ಲಿ ಇಬ್ಬರೂ ಇಳಿದಿದ್ದಾರೆ. ಹೈಕಮಾಂಡ್ ಇಲ್ಲಿನ ಸಿಎಂ, ಡಿಸಿಎಂಗೆ ಟಾರ್ಗೆಟ್ ಕೊಟ್ಟಿದೆ, ಇಂಡಿಕೇಟ್ಗೆ ತೆಲಂಗಾಣ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ಸಿಂಡಿಕೇಟ್ಗೆ ಮಧ್ಯಪ್ರದೇಶ ಚುನಾವಣೆಯ ಜವಾಬ್ದಾರಿಯ ಜೊತೆಗೆ, ಪ್ರತಿ ಮಂತ್ರಿಗಳಿಗೂ ಜವಾಬ್ದಾರಿ ಕೊಟ್ಟು ಸುಲಿಗೆ ಮಾಡುತ್ತಿದ್ದಾರೆ. ಇವರಿಂದ ಜನರ ಮೇಲೆ ಸುಲಿಗೆಯ ಹೊರೆಬೀಳುತ್ತಿದೆ" ಎಂದು ದೂರಿದರು.
"ಸೋಷಿಯಲ್ ಮೀಡಿಯಾದ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಉಡುಪಿ ಕೇಸ್ನಲ್ಲಿ ತುಮಕೂರಿನ ಶಕುಂತಲಾ ಧ್ವನಿ ಎತ್ತಿದಾಗ ಅವರನ್ನು ಅರೆಸ್ಟ್ ಮಾಡಿದ್ದರು. ನಾವು ಹೇಳಿದ ನಂತರ ಅವರನ್ನು ಬಿಟ್ಟು ಕಳುಹಿಸಿದರು, ಹೀಗೆ ಬೇಕಾದಷ್ಟು ಜನರನ್ನು ಅರೆಸ್ಟ್ ಮಾಡುವ ಕೆಲಸ ನಡೆಯುತ್ತಿದೆ. ಮಂಡ್ಯದಲ್ಲಿ ಪೇ ಸಿಎಸ್ ಪೋಸ್ಟರ್ ಹಾಕಿದ್ದಕ್ಕೆ ಅವರ ಮೇಲೆ ಎಫ್ಐಆರ್ ಹಾಕಿದ್ದಾರೆ. ಕರ್ನಾಟಕದಲ್ಲಿ ಏನು ಕಮ್ಯುನಿಸ್ಟ್ ಸರ್ಕಾರದ ಅಧಿಕಾರನಾ?, ನಾವು ಡಿಜಿಗೆ ಇದರ ಬಗ್ಗೆ ಮನವಿ ಮಾಡುತ್ತೇವೆ. ಸಿಎಂ, ಡಿಸಿಎಂ ಬಿಜೆಪಿ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಡಲು ಹೊರಟಿದ್ದರೆ ಅದು ನಿಮ್ಮಿಂದ ಸಾಧ್ಯವಿಲ್ಲ" ಎಂದರು.