ಸಿದ್ದರಾಮಯ್ಯ ಬಂದರೂ ಪಕ್ಷಕ್ಕೆ ಸೇರಿಸಿ ಕೊಳ್ಳಲ್ಲ - ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಬೆಂಗಳೂರು: ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳೂ ಕೂಡ ನಿಮ್ಮನ್ನೇ ತಿರಸ್ಕಾರ ಮಾಡಿ ನಮ್ಮ ಪಕ್ಷ ಸೇರುವ ಸ್ಥಿತಿ ಇವತ್ತು ದೇಶದಲ್ಲಿದೆ. ಆದ್ದರಿಂದ ನೀವೂ ಬೇಡ, ನಿಮ್ಮ ಹೆಣವೂ ಇಲ್ಲಿ ಬರುವುದು ಬೇಡ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶವ ಇಲ್ಲಿಗ್ಯಾಕೆ ಬರುತ್ತದೆ ಎಂದು ರಾಜ್ಯ ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಶವ ಹೋಗಬೇಕಿರುವುದು ಬೇರೆ ಜಾಗಕ್ಕೆ. ಸಿದ್ದರಾಮಯ್ಯ ಶವ ಇಲ್ಲಿಗ್ಯಾಕೆ ಬರುತ್ತದೆ ? ನಮ್ಮ ಪಕ್ಷ ಶವಾಗಾರ ಅಲ್ಲ. ಅವರಿಗೆ ಬಹುಶಃ ಬುದ್ಧಿಭ್ರಮಣೆ ಆಗಿದೆ. ಅವರು ಶವದ ಬಗ್ಗೆ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ ಅವರು ನನ್ನ ಶವವೂ ಬಿಜೆಪಿ ಕಚೇರಿಗೆ, ಆರ್.ಎಸ್.ಎಸ್ ಕಚೇರಿಗೆ ಹೋಗಲ್ಲ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದರು.
ರಾಜಕೀಯ ಅಂತ್ಯ ಸಂಸ್ಕಾರ ಆರಂಭವಾಗಿದೆ ಎಂದ ನಾರಾಯಣಸ್ವಾಮಿ;ಕೋಲಾರದಲ್ಲೇ ಅವರ ರಾಜಕೀಯ ಅಂತ್ಯಸಂಸ್ಕಾರ ಆರಂಭವಾಗಿದೆ. ಅದರಿಂದಾಗಿಯೇ ಅವರಿಗೆ ಶವದ ನೆನಪು ಬಂದಿರಬೇಕು. ಇದು ಕೊನೆಯ ಚುನಾವಣೆ ಎನ್ನುತ್ತಿದ್ದರು. ಆದರೆ, ಇದು ಸೋಲಿನ ಚುನಾವಣೆ ಆಗಿರಲಿದೆ ಎಂಬ ಅನಿಸಿಕೆ ನನ್ನದು. ಸೋಲಿನ ಭಯದಿಂದ ವಿಚಲಿತರಾಗಿ ಬಿಜೆಪಿ ಮತ್ತು ಬಿಜೆಪಿ ಮುಖಂಡರ ಬಗ್ಗೆ ಕೆಟ್ಟಕೆಟ್ಟದಾಗಿ ಬಿಂಬಿಸಿ ಮಾತನಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ನೀವೊಬ್ಬ ಮಾಜಿ ಮುಖ್ಯಮಂತ್ರಿಗಳು. ಪ್ರತಿಪಕ್ಷ ನಾಯಕರಾಗಿದ್ದೀರಿ, ಹಿರಿಯ ರಾಜಕಾರಣಿಯಾಗಿದ್ದೀರಿ, ನಿಮ್ಮ ಬಗ್ಗೆ ನಮಗೆಲ್ಲರಿಗೂ ಗೌರವ ಇದೆ. ಆ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನಿಮ್ಮನ್ನು ಕೆಟ್ಟದಾಗಿ ತೋರಿಸಲು ನಮಗೆ ಇಚ್ಛೆ ಇಲ್ಲ. ಆದರೆ, ಆ ಕೆಟ್ಟ ಸಂಸ್ಕೃತಿಯನ್ನು ನೀವ್ಯಾಕೆ ಮೇಲೆ ಹಾಕಿಕೊಳ್ಳುತ್ತೀರಿ ಎಂದು ಕೇಳಿದರು.
ಬಿಜೆಪಿ ನಿಮ್ಮಂಥವರಿಗಾಗಿ ಇರುವ ಪಕ್ಷ ಅಲ್ಲ. ನೀವು ಬಂದರೂ ನಿಮ್ಮನ್ನು ಈ ಪಕ್ಷದಲ್ಲಿ ಬಹುಶಃ ಸೇರಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಕಾರ್ಯ, ಈ ದೇಶ ರಕ್ಷಣೆ, ಸಮಾಜದ ಉತ್ತಮ ವ್ಯವಸ್ಥೆ ಮಾಡುತ್ತಿರುವುದನ್ನು ನೋಡಿ ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ನಿಮ್ಮನ್ನೇ ತೊರೆದು ನಮ್ಮ ಪಕ್ಷ ಸೇರಲಿದ್ದಾರೆ ಎಂಬುದಾಗಿ ನಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ಇವತ್ತು ಅನೇಕರು ನಮ್ಮ ಪಕ್ಷಕ್ಕೆ ಹೊಸದಾಗಿ ಸೇರಿದ್ದಾರೆ. ನನ್ನದೇ ಸ್ನೇಹಿತ ಹಾಗೂ ಮೈಸೂರಿನ ಮಾಜಿ ಶಾಸಕ ವಾಸು ಅವರ ಮಗನೂ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಾನು ನನ್ನ ತಂದೆಯವರ ಜೊತೆ ಕೆಲಸ ಮಾಡಿದ್ದರೂ ಕೂಡ ಆ ಪಕ್ಷದ ಜೊತೆಯಲ್ಲಿದ್ದರೂ ಕೂಡ, ನಾನು ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿ, ಮೋದಿಯವರ ನಡತೆ ಮತ್ತು ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಬರುತ್ತಿದ್ದೇನೆ ಎಂದಿದ್ದಾರೆ. ಅಂದರೆ, ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳೂ ಕೂಡ ನಿಮ್ಮನ್ನೇ ತಿರಸ್ಕಾರ ಮಾಡಿ ನಮ್ಮ ಪಕ್ಷ ಸೇರುವ ಸ್ಥಿತಿ ಇವತ್ತು ದೇಶದಲ್ಲಿದೆ. ಆದ್ದರಿಂದ ನೀವೂ ಬೇಡ, ನಿಮ್ಮ ಹೆಣವೂ ಇಲ್ಲಿ ಬರುವುದು ಬೇಡ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಪುತ್ರ ಮಾತ್ರವಲ್ಲ, ಡಿಕೆ ಮನೆಯಿಂದಲೂ ಮುಂದೆ ಬಿಜೆಪಿಗೆ ಬರ್ತಾರೆ: ನಳಿನ್ ಕುಮಾರ್ ಕಟೀಲ್