ಬೆಂಗಳೂರು: ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುಡುಕ, ಭ್ರಷ್ಟಾಚಾರಿ ಆಗಿದ್ದರು. ಇವತ್ತು ಉಗ್ರಪ್ಪನವರಿಗೆ ಅವರು ಕುಡುಕರೆಂದು ಅನಿಸುತ್ತಿಲ್ಲ ; ಹಾಗೆಯೇ ಅವರಲ್ಲಿ ಭ್ರಷ್ಟಾಚಾರವೂ ಕಾಣುತ್ತಿಲ್ಲ.
ಕಾಂಗ್ರೆಸ್‍ನ ಪರಂಪರೆ ಏನು ಎಂಬುದು ಇಂದು ಅನಾವರಣಗೊಂಡಿದೆ. ಭ್ರಷ್ಟಾಚಾರವೇ ಕಾಂಗ್ರೆಸ್‍ನ ಪರಂಪರೆ ಎಂಬುದು ಗೊತ್ತಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ಇವತ್ತು ಅವರದೇ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮುಖವಾಡವನ್ನು ಕಳಚಿ ಅವರನ್ನು ವಿಲನ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಇದರಿಂದ ಸ್ಪಷ್ಟವಾಗಿದೆ.
ಡಿ ಕೆ ಶಿವಕುಮಾರ್ ಅವರು ನಿನ್ನೆ ಭ್ರಷ್ಟಾಚಾರದಲ್ಲಿ ಶೇ.8 ರಿಂದ ಶೇ.16ಕ್ಕೆ ಏರಿದ್ದರು. ಇವತ್ತು ಅವರು ಪಕ್ಕಾ ರೈತ ಮತ್ತು ಅವರ ಆಸ್ತಿಯೆಲ್ಲವೂ ವ್ಯಾಪಾರದ ದುಡಿಮೆ. ಪರಿಶ್ರಮದಿಂದ ಬಂದುದೇ ಆಗಿದೆ ಎಂಬ ಮಾತು ಉಗ್ರಪ್ಪನವರಿಂದ ಬಂದಿದೆ ಎಂದು ತಿಳಿಸಿದರು.
ಲುಲು ಮಾಲ್‍ನ ಹಣ ಎಲ್ಲಿಂದ ಬಂತೆಂದು ಡಿಕೆಶಿ ಹೇಳಬೇಕು. ವಕೀಲ ಉಗ್ರಪ್ಪ ಅವರೀಗ ನಗೆಪಾಟಲಿಗೆ ಸಿಲುಕಿದ್ದು, ಅಪ್ಪಟ ಸುಳ್ಳುಗಾರ ಎಂಬುದು ಸಾಬೀತಾಗಿದೆ. ನಿನ್ನೆ ಉಗುಳಿದ್ದೆಲ್ಲವನ್ನೂ ಅವರು ವಾಪಸ್ ಪಡೆದಿದ್ದಾರೆ. ಉಗ್ರಪ್ಪ ಅವರು ಸಿದ್ದರಾಮಯ್ಯ ಅವರ ಮೌತ್‍ಪೀಸ್ ಆಗಿದ್ದಾರೆ. ಈ ನಾಟಕದ ಸೂತ್ರಧಾರಿ ಸಿದ್ದರಾಮಯ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೇಳುವುದೆಲ್ಲವೂ ಸುಳ್ಳು ಹಾಗೂ ಪಿಸುಮಾತಿನಲ್ಲಿ ಹೇಳುವುದೆಲ್ಲವೂ ಸತ್ಯ ಎಂಬುದು ಉಗ್ರಪ್ಪರಿಂದ ಗೊತ್ತಾಗಿದೆ. ಕಾಂಗ್ರೆಸ್‍ನವರು ವೇದಿಕೆಯಲ್ಲಿ ಸತ್ಯ ಹೇಳುವುದಿಲ್ಲ. ಆ ಪಕ್ಷವೊಂದು ಭ್ರಷ್ಟಾಚಾರದ ಕೂಪ ಎಂಬುದು ಜನರಿಗೆ ಗೊತ್ತಾಗಿದೆ ಎಂದರು.
ಇದನ್ನೂ ಓದಿ:ಡಿಕೆಶಿ ಬಗ್ಗೆ ಅವರ ಪಕ್ಷದವರೇ ಹೇಳಿಕೆ ಕೊಟ್ಟಿದ್ದು, ನಾವು ವಿಶ್ಲೇಷಣೆ ಮಾಡುವ ಅವಶ್ಯಕತೆಯಿಲ್ಲ: ಅಶ್ವತ್ಥ ನಾರಾಯಣ
ಉಗ್ರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಡಿಕೆಶಿಗೆ ಶಕ್ತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಾಲಯದಲ್ಲೇ ಆಗಿರುವ ಈ ತಪ್ಪಿನ ಬಗ್ಗೆ ತಿಳಿದಿದ್ದರೂ ಡಿಕೆಶಿ ಅದಕ್ಕೆ ಸಮಜಾಯಿಷಿ ಕೊಟ್ಟಿಲ್ಲ. ಅಧ್ಯಕ್ಷ ಸ್ಥಾನದ ಅಶಕ್ತ ವ್ಯಕ್ತಿ ಎಂಬುದು ಸಾಬೀತಾಗಿರುವ ಕಾರಣ ಡಿಕೆಶಿ ಪಕ್ಷಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಈ ವಿಚಾರದ ಬಗ್ಗೆ ಡಿಕೆಶಿ ದೂರು ಕೊಡಲಿ. ತನಿಖೆಯೂ ಆಗಲಿ ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
“ಬೀದಿಯಲ್ಲಿ ಚಪ್ಪಲಿಯಲ್ಲಿ ಹೊಡೆದು ಮನೆಗೆ ಬಂದು ಕ್ಷಮೆ ಕೇಳಿದರಂತೆ” ಎಂಬ ಸ್ಥಿತಿ ಡಿಕೆಶಿ ಅವರದಾಗಿದೆ. ಉಗ್ರಪ್ಪ ಮತ್ತು ಸಲೀಂ ಅವರು ಕಾಂಗ್ರೆಸ್‍ನ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ಕೆಪಿಸಿಸಿ ಅಧ್ಯಕ್ಷಗಿರಿ ಪಡೆದರಷ್ಟೇ ಮುಖ್ಯಮಂತ್ರಿ ಸ್ಥಾನ ಎಂಬ ಕನಸು ಹೊತ್ತು ಚಿಕ್ಕಮಕ್ಕಳ ತರ ಡಿಕೆಶಿಯವರು ಅಧ್ಯಕ್ಷರಾದರು. ಅವರದೇ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿಯವರ ತೇಜೋವಧೆ ಆಗಿದೆ ಹಾಗೂ ಮುಖವಾಡ ಕಳಚಿ ಬಿದ್ದಿದೆ ಎಂದು ತಿಳಿಸಿದರು.
ಡಿಕೆಶಿಯವರು ನಿಜವಾಗಿಯೂ ಪಕ್ಷದ ಅಧ್ಯಕ್ಷತೆ ಹೊಂದಿದ್ದರೆ, ಪರಿಶುದ್ಧರಾಗಿದ್ದರೆ, ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅನಿಸಿದ್ದರೆ ಉಗ್ರಪ್ಪ-ಸಲೀಂ ಅವರನ್ನು ಪಕ್ಷದಿಂದ ಹೊರಕ್ಕೆ ಹಾಕಲಿ ಎಂದು ಒತ್ತಾಯಿಸಿದರು. ಡಿಕೆಶಿ ಭ್ರಷ್ಟರಲ್ಲ, ಕುಡುಕರಲ್ಲ, ಅವರು ಪರಿಶುದ್ಧರು ಎನ್ನಲು ಹತ್ತಾರು ವಕ್ತಾರರನ್ನು ನೇಮಿಸಬೇಕಾದ ಸ್ಥಿತಿ ಈಗ ಕಾಂಗ್ರೆಸ್‍ಗೆ ಬಂದಿದೆ ಎಂದರು.
ತಮ್ಮ ಮೇಲೆ ಐಟಿ, ಇಡಿ ಮತ್ತಿತರ ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿ ನಡೆದಾಗ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಮತ್ತಿತರ ನಾಯಕರ ವಿರುದ್ಧ ಬೇಜವಾಬ್ದಾರಿ ವಾಗ್ದಾಳಿ ಮಾಡಿದ್ದ ಡಿಕೆಶಿ ಈಗ ಏನು ಉತ್ತರ ನೀಡುತ್ತೀರಿ ಎಂದು ಕೇಳಿದರು. ಡಿಕೆಶಿ ನೇತೃತ್ವದ ಕೆಟ್ಟ ಪರಂಪರೆಯ ಕೆಟ್ಟ ಪಕ್ಷವನ್ನು ರಾಜ್ಯದ ಜನತೆ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿಯವರು ತನಿಖಾ ಸಂಸ್ಥೆಗಳು ಮತ್ತು ನಮ್ಮ ಪಕ್ಷದ ನಾಯಕರ ಮೇಲೆ ಮಾಡಿದ ಬೇಜವಾಬ್ದಾರಿ ಟೀಕೆ ಮತ್ತು ಆರೋಪಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಬಣ ರಾಜಕೀಯವನ್ನು ಜನತೆ ಒಪ್ಪದೆ ಬಿಜೆಪಿಯನ್ನು ಮುಂದೆಯೂ ಬೆಂಬಲಿಸಲಿದ್ದಾರೆ ಎಂದರು.
ಪಕ್ಷದ ವಿರುದ್ಧ ಮಾತನಾಡುವ ಹೆಚ್ ವಿಶ್ವನಾಥ್ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅವರ ಬಾಯಿ ಬಂದ್ ಆಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‍ನ ಒಂದು ಚಕ್ರ ಮಂಡ್ಯದ ಕಡೆ ಹಾಗೂ ಮತ್ತೊಂದು ಚಕ್ರ ಬೆಳಗಾವಿ ಕಡೆ ಹೋಗುತ್ತಿರುವ ಕಾರಣ ಆ ಪಕ್ಷ ಒಂದೇ ರಸ್ತೆಯಲ್ಲಿ ಸಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ.
ಬಿಜೆಪಿಗೆ ಪರ್ಯಾಯ ಸರ್ಕಾರ ಕೊಡುವ ಕನಸನ್ನು ಕಾಣಲೂ ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕರ್ತರೂ ಮುಂದಿನ ದಿನಗಳಲ್ಲಿ ಯಾವ ರಥ ಹತ್ತಬೇಕು, ಯಾವ ಬಂಡಿ ಹತ್ತಿ ಎಲ್ಲೆಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.