ಬೆಂಗಳೂರು:ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿಗಳಿಕೆ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಬಿಐ ತನಿಖೆ ಮುಂದುವರೆಯುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರು ತಡಮಾಡದೇ ರಾಜೀನಾಮೆ ಸಲ್ಲಿಸಬೇಕು. ಉನ್ನತ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಸಿಎಂ ಸಿದ್ದರಾಮಯ್ಯ ಅವರೇ ಡಿಕೆಶಿ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಇವತ್ತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಡುತ್ತೇವೆ ಎಂದರು.
ಇವತ್ತು ಹೈಕೋರ್ಟ್ನಲ್ಲಿ ಒಂದು ಆದೇಶ ಹೊರಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಿಬಿಐನಲ್ಲಿ ದಾಖಲಾಗಿದ್ದ ಕೇಸಿನ ತನಿಖೆ ನಡೆಸದಂತೆ ಈ ಮೊದಲು ತಡೆಯಾಜ್ಞೆ ತಂದಿದ್ದರು. ಇವತ್ತು ಆ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ಕೊಟ್ಟಿದೆ. ಇದರಿಂದ ಇವತ್ತು ನ್ಯಾಯಕ್ಕೆ ಬೆಲೆ ಸಿಕ್ಕಿದೆ. ಈ ಆದೇಶದಿಂದ ಡಿ.ಕೆ.ಶಿವಕುಮಾರರಿಗೆ ಹಿನ್ನಡೆ ಆಗಿರಬಹುದು ಅಥವಾ ಬೇಸರ ಆಗಿರಬಹುದು.
ಆದರೆ, ಮಾನ್ಯ ಸಿದ್ದರಾಮಯ್ಯರಿಗೆ ತುಂಬ ಖುಷಿಯಾಗಿದೆ. ಸಿದ್ದರಾಮಯ್ಯ ಅವರನ್ನು ಹೇಗಾದರೂ ಮನೆಗೆ ಕಳುಹಿಸಿ ನಾನು ಸಿಎಂ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡ್ತಿದ್ದಾರೆ. ಈತ ಹೇಗಾದರೂ ಮತ್ತೆ ಜೈಲಿಗೆ ಹೋದರೆ ನನಗೆ ಅನುಕೂಲ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿರುವುದಾಗಿ ನಿನ್ನೆವರೆಗೂ ಮಾತುಗಳು ಕೇಳಿ ಬರುತ್ತಿದ್ದವು . ಇವತ್ತು ಸಿದ್ದರಾಮಯ್ಯನವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಸುಳ್ಳ - ಮಳ್ಳ ಯಾರೆಂದು ಜನರೇ ಹೇಳ್ತಾರೆ:ಬಿಜೆಪಿ ನಾಯಕರು ಸುಳ್ಳ- ಮಳ್ಳ ನಾಯಕರು ಎಂಬ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಳ್ಳ ಯಾರು ಮಳ್ಳ ಯಾರೆಂದು ಬೆಂಗಳೂರಿನ ಜನರು ಹೇಳುತ್ತಾರೆ. ಮೆತ್ತ ಮೆತ್ತಗೆ ಏನೇನು ಮಾಡುತ್ತಾರೋ ಅವರನ್ನು ಮಳ್ಳ ಎನ್ನುತ್ತಾರೆ. ರಾಮಲಿಂಗಾರೆಡ್ಡಿಯವರೇ ನಿಮ್ಮನ್ನೇ ಎಲ್ಲರೂ ಮಳ್ಳ ಎಂದು ಹೇಳುತ್ತಿದ್ದಾರೆ. ಸುಳ್ಳ ಎಂದು ಸಿದ್ದರಾಮಯ್ಯ ಮತ್ತು ಕ್ಯಾಂಪ್ ಪ್ರಸಿದ್ಧಿ ಪಡೆದಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ನೀಡಿದರು.
ಶಾಸಕರ ಮೇಲೆ ಹಿಡಿತ ಇಲ್ಲದ ಕಾಂಗ್ರೆಸ್-ಮಹೇಶ್ ಟೆಂಗಿನಕಾಯಿ ಆರೋಪ:ಬಿಜೆಪಿ ವಿರುದ್ಧ ಆರೋಪ ಮಾಡುವ ಡಿ.ಕೆ.ಶಿವಕುಮಾರ್ ಅವರಿಂದ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಆಕ್ಷೇಪಿಸಿದರು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬೆಳಗಾವಿಗೆ ಹೋಗಿದ್ದು, ಯಾವುದೇ ಕಾಂಗ್ರೆಸ್ ಶಾಸಕರು ಅವರನ್ನು ಸ್ವಾಗತಿಸಿಲ್ಲ. ಐಟಿ ದಾಳಿಯಲ್ಲಿ ಲಭಿಸಿದ ಕೋಟ್ಯಂತರ ರೂಪಾಯಿ ಹಣದ ವಿಚಾರದಲ್ಲಿ ಕಾಂಗ್ರೆಸ್‍ನವರ ಪಾತ್ರ ಇದೆ ಎಂಬುದು ಗೊತ್ತಾಗಿದೆ ಎಂದರು.
ಕಾಂಗ್ರೆಸ್ಸಿನ ಒಳಗೆ ತಳಮಳದ ಘಟನೆಗಳು ನಡೆಯುತ್ತಿವೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ದುಃಸ್ಥಿತಿಗೆ ತಲುಪಿದೆ. ಬಿಜೆಪಿ ಪಾತ್ರವಿದೆ ಎಂದಿದ್ದರೆ ಆ ಕುರಿತು ತನಿಖೆ ಮಾಡಿಸಿ. ಕಾಂಗ್ರೆಸ್ ಪಕ್ಷದ ವಿರುದ್ಧ ಬಂದ ಭ್ರಷ್ಟಾಚಾರದ ಆರೋಪಗಳನ್ನು ಮರೆಮಾಚಲು ಶಿವಕುಮಾರ್ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯದಿರಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ:ಎಫ್ಐಆರ್ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ: ಡಿಸಿಎಂ ಡಿ.ಕೆ.ಶಿವಕುಮಾರ್