ಬೆಂಗಳೂರು:ಬಿಬಿಎಂಪಿ ಹೆಲ್ತ್ ವರ್ಕರ್ ಎಂದು ಮನೆ ಮನೆಗೆ ಹೋಗಿ ಸರ್ವೆ ಮಾಡುವ ಸೋಗಿನಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಸೋಗಿನಲ್ಲಿ ಸರಗಳ್ಳತನ: ಆರೋಪಿ ಅರೆಸ್ಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈಗ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಎಂದು ಹೇಳಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮೂರ್ತಿ ಬಂಧಿತ ಆರೋಪಿ. ಕೊರೊನಾ ಹಿನ್ನೆಲೆ ಬಿಬಿಎಂಪಿ ಸಿಬ್ಬಂದಿ ಮನೆ ಮನೆಗೆ ಹೋಗಿ ರೋಗದ ಗುಣಲಕ್ಷಣ ಮಾಹಿತಿ ಸರ್ವೆ ಮಾಡುತ್ತಿರುವುದನ್ನ ಅರಿತಿದ್ದ. ತದನಂತರ ಬಿಬಿಎಂಪಿ ಹೆಲ್ತ್ ವರ್ಕರ್ ವೇಷಧರಿಸಿ ಸರ್ವೆ ನೆಪದಲ್ಲಿ ಮನೆ ಮನೆಗೂ ಹೋಗಿ ಬಿಬಿಎಂಪಿ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಅಗತ್ಯ ಮಾಹಿತಿ ನೀಡುವಂತೆ ಕೇಳುತ್ತಿದ್ದ. ನಿಜವಾಗಿಯೂ ಬಿಬಿಎಂಪಿ ಸಿಬ್ಬಂದಿ ಎಂದು ನಂಬುತ್ತಿದ್ದ ಮಹಿಳೆಯರು ಮಾಹಿತಿ ನೀಡುತ್ತಿದ್ದರು. ಬಳಿಕ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕುಡಿಯುವುದಕ್ಕೆ ನೀರು ಕೊಡಿ ಎಂದು ಕೇಳುತ್ತಿದ್ದ, ನೀರು ತರಲು ಹೋಗುತ್ತಿದ್ದಂತೆ ಹಿಂಬದಿಯಿಂದ ಸರ ಕಸಿದು ಪರಾರಿಯಾಗುತ್ತಿದ್ದ.
ಇದೇ ರೀತಿ, ಜೂನ್ 16 ರಂದು ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇಔಟ್ ಮನೆಯೊಂದಕ್ಕೆ ಹೋಗಿದ್ದಾಗ ಹೆಲ್ತ್ ವರ್ಕರ್ ಎಂದು ಪರಿಚಯಿಸಿಕೊಂಡು ನಾಟಕವಾಡಿ ಸರ ಕದ್ದು ಪರಾರಿಯಾಗುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಹಿಂದೆ ಬೈಕ್ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರೇ ಈ ವೇಷದಲ್ಲಿ ಬರುತ್ತಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.