ಬೆಂಗಳೂರು: ಪೊಲೀಸರ ವಶದಲ್ಲಿದ್ದ ವೇಳೆ ಎಸ್ಕೇಪ್ ಆಗಿದ್ದ ಸರಗಳ್ಳರನ್ನ ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆ ಕಾರ್ಯಕ್ರಮಕ್ಕೆ ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿ ಅವರಿಂದ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗುತ್ತಿದ್ದ ಖದೀಮರು ಸದ್ಯ ದಕ್ಷಿಣ ವಿಭಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಹಮದ್ ರಫೀಕ್, ಇಮ್ರಾನ್, ಹನೀಫ್ ಬಂಧಿತ ಆರೋಪಿಗಳಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಬಂಧಿತ ರಫೀಕ್ ದಕ್ಷಿಣ ಕನ್ನಡದವನಾಗಿದ್ದು, ಈತನನ್ನ ಮಂಗಳೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ರಫೀಕ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬೆಂಗಳೂರು ಪೊಲೀಸರು ಬಾಡಿ ವಾರೆಂಟ್ ಮೂಲಕ ಕರೆ ತರುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಮತ್ತೆ ಸರಗಳ್ಳತನ ಮಾಡಿ ಸದ್ಯ ಸಿಕ್ಕಿಬಿದ್ದಿದ್ದಾನೆ.
ಹಾಗೆ ಮತ್ತೋರ್ವ ಬಂಧಿತ ಇಮ್ರಾನ್ ಕೊಕಾ ಆ್ಯಕ್ಟ್ ಅಡಿ ಜೈಲು ಸೇರಿದ್ದ. ಇತ್ತೀಚೆಗೆ ಇಮ್ರಾನ್ ರಿಲೀಸ್ ಆದ ನಂತರ ಮಹಮದ್ ರಫೀಕ್ ಜೊತೆಗೂಡಿ ಸರಗಳ್ಳತನ ಕೃತ್ಯ ನಡೆಸುತ್ತಿದ್ದ ಇಬ್ಬರು ಸಹಚರರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಆರೋಪಿಗಳ ಮೇಲೆ ಮಂಗಳೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಹಲವೆಡೆ 25ಕ್ಕೂ ಹೆಚ್ಚು ಪ್ರಕರಣ ಇದ್ದು, ಅವರಿಂದ ಚಿನ್ನಾಭರಣ, ನಗದು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.