ಬೆಂಗಳೂರು: ಕದ್ದ ಬೈಕ್ನಲ್ಲಿ ಸರಣಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಹೊರರಾಜ್ಯದ ಆರು ಮಂದಿ ಆರೋಪಿಗಳನ್ನು ನಗರ ಈಶಾನ್ಯ ವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹೆಡೆಮುರಿಕಟ್ಟಿದ್ದಾರೆ.
ದೆಹಲಿ ಮೂಲದ ಸುರೇಶ್ ಕುಮಾರ್, ಹಸೀನ್ ಖಾನ್, ಇರ್ಷಾದ್, ಸಲೀಂ ಹಾಗೂ ಅಪ್ರೋಜ್ ಹಾಗೂ ಹ್ಯಾರಿಸ್ ಬಂಧಿತ ಆರೋಪಿಗಳು. ಬಂಧಿತರಿಂದ 11 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಬಾಗಲೂರು, ದೇವನಹಳ್ಳಿ, ಯಲಹಂಕ ಹಾಗೂ ಅಮೃತಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಏಳು ಪ್ರಕರಣ ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇ ತಿಂಗಳು 16ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಸೇರಿದಂತೆ ಈಶಾನ್ಯ ವಿಭಾಗದಲ್ಲಿ ಸರಣಿಗಳ್ಳತನವಾಗಿತ್ತು. ಕೂಡಲೇ ಕಾರ್ಯಪ್ರವೃತ್ತಗೊಂಡು ಬಾಗಲೂರು ಹಾಗೂ ಯಲಹಂಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಂದೇ ದಿನದಲ್ಲಿ ಸರಣಿಗಳ್ಳತನ ಮಾಡಿರುವ ತನಿಖೆ ಕೈಗೊಂಡ ಈಶಾನ್ಯ ವಿಭಾಗದ ಪೊಲೀಸರು ಸಾದಹಳ್ಳಿ ಗೇಟ್ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲನೆ ವೇಳೆ ಹೋಟೆಲ್ ಒಂದರಲ್ಲಿ ಆರೋಪಿಗಳು ಊಟಕ್ಕೆ ಬಂದಿರುವುದು ಗೊತ್ತಾಗಿದೆ. ಕೂಡಲೇ ತನಿಖಾ ತಂಡವು ಸ್ಥಳಕ್ಕೆ ತೆರಳಿ ಪ್ರಮುಖ ಅರೋಪಿ ಸುರೇಶ್ ಕುಮಾರ್ ಸೇರಿದಂತೆ ಇಬ್ಬರನ್ನು ಬಂಧಿಸಿದೆ. ಇವರು ನೀಡಿದ ಸುಳಿವಿನ ಮೇರೆಗೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳ ಪೈಕಿ ಹ್ಯಾರೀಸ್ ದೇವನಹಳ್ಳಿಯ ಕನ್ನ ಮಂಗಲದಲ್ಲಿ ಚಿಪ್ಸ್ ಅಂಗಡಿ ಇಟ್ಟುಕೊಂಡಿದ್ದ. ಈತನ ಸಂಬಂಧಿಕರ ಮೂಲಕ ಮತ್ತೋರ್ವ ಆರೋಪಿ ಇರ್ಷಾದ್ನ ಪರಿಚಯವಾಗಿದೆ. ಕೆಲ ದಿನಗಳ ನಂತರ ದೆಹಲಿಯ ಸುರೇಶ್ ಕುಮಾರ್ ಗ್ಯಾಂಗ್ ಕರೆಯಿಸಿಕೊಂಡಿದ್ದಾರೆ. ನಗರ ಈಶಾನ್ಯ ವಿಭಾಗದಲ್ಲಿ ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಇದರಂತೆ ದೆಹಲಿ ಗ್ಯಾಂಗ್ ನಗರಕ್ಕೆ ಕಾಲಿಟ್ಟ ನಂತರ ಚಿಕ್ಕಜಾಲದಲ್ಲಿ ಬೈಕ್ ಕಳ್ಳತನ ಮಾಡಿದೆ. ಬಳಿಕ ಯಲಹಂಕ, ಬಾಗಲೂರು, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದಾರೆ. ಕೃತ್ಯ ಬಳಿಕ ದೆಹಲಿಗೆ ವಿಮಾನದ ಮೂಲಕ ತೆರಳಲು ಪ್ಲೈಟ್ ಟಿಕೆಟ್ ಮಾಡಿಕೊಂಡಿದ್ದರು. ಇದನ್ನ ಅರಿತ ಪೊಲೀಸರು ವಿಮಾನ ಹತ್ತುವ ಕೆಲವೇ ಗಂಟೆಗಳಲ್ಲಿ ಸಾದಹಳ್ಲಿ ಗೇಟ್ ಬಳಿ ಬಂಧಿಸಿದ್ದಾರೆ.