ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಗುರುವಾರ ಪ್ರಕಟವಾಗಬೇಕಾಗಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ (ಆಗಸ್ಟ್ 21) ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ಮಧ್ಯಾಹ್ನ 12.30ಕ್ಕೆ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಈ ಕೆಳಗಿನ ಲಿಂಕ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. http://karresults.nic.in
ಕೋವಿಡ್ ಕಾರಣದಿಂದಾಗಿ ಎದುರಾಗಿದ್ದ ಸಂಕಷ್ಟದ ಸಂದರ್ಭದಲ್ಲಿಯೂ ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ನಿಗದಿಯಂತೆ ನಾಳೆ ಪ್ರಕಟವಾಗಬೇಕಿದ್ದ ಫಲಿತಾಂಶವನ್ನ ಶುಕ್ರವಾರ ಪ್ರಕಟವಾಗಲಿದೆ. ಈ ಬಾರಿ ಒಟ್ಟು 1,94,419 ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1,75,428 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಈ ಸಲ ಸಿಇಟಿ ನಡೆಯುವ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಕೂಡ ಬಂದಿತ್ತು. ಈ ಕಾರಣಕ್ಕೆ ಅರ್ಹರಾಗಿಲ್ಲದ ಕೆಲವರು ಸಿಇಟಿಯಿಂದ ಹಿಂದೆ ಸರಿದರು.
ಜುಲೈ 30-31 ಮತ್ತು ಆಗಸ್ಟ್ 1ರಂದು ಸಿಇಟಿ ಪರೀಕ್ಷೆ ನಡೆದಿತ್ತು. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪರೀಕ್ಷೆ ನಡೆದ ಕೇವಲ 20 ದಿನಗಳಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.