ಕರ್ನಾಟಕ

karnataka

ETV Bharat / state

ಸಿಇಟಿ ಪರೀಕ್ಷಾ ದಿನಾಂಕ ಪ್ರಕಟ: ಜ.10ರಿಂದ ಅರ್ಜಿ ಸಲ್ಲಿಕೆ ಆರಂಭ - ಏ.20, 21ರಂದು ಪರೀಕ್ಷೆ - ಸಾಮಾನ್ಯ ಪ್ರವೇಶ ಪರೀಕ್ಷೆ

Cet Exam: ವಿವಿಧ ವೃತ್ತಿಪರ ಕೋರ್ಸುಗಳಿಗೆ 2024-25ರಲ್ಲಿ ಪ್ರವೇಶಾತಿ ಬಯಸುವವರಿಗೆ ಏಪ್ರಿಲ್‌ 20 ಮತ್ತು 21ರಂದು ಸಿಇಟಿ ಪರೀಕ್ಷೆ ನಡೆಯಲಿದೆ.

cet
ಸಿಇಟಿ

By ETV Bharat Karnataka Team

Published : Dec 23, 2023, 6:42 AM IST

ಬೆಂಗಳೂರು :ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಸಿಇಟಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗೆ 2024-25 ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಮುಂಬರುವ ಏಪ್ರಿಲ್‌ 20 (ಶನಿವಾರ) ಮತ್ತು 21ರಂದು (ಭಾನುವಾರ) ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಏ.20 ರ ಬೆಳಗ್ಗೆ 10.30 ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ ಗಣಿತ, 21 ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19 ರ ಶುಕ್ರವಾರದಂದು ಬೆಂಗಳೂರು, ಬೀದರ್‌, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಜನವರಿ 10 ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸ್​ಗಳು, ಪಶು ಸಂಗೋಪನೆ, ಬಿಎಸ್​ಸಿ (ನರ್ಸಿಂಗ್), ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್​ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೂ ಈ ಸೂಚನೆ ಅನ್ವಯಿಸುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸರಿಯಾದ ಆರ್‌.ಡಿ. ಸಂಖ್ಯೆ, ಜಾತಿ/ಆದಾಯ ಪ್ರಮಾಣಪತ್ರ ಮತ್ತು ಕಲ್ಯಾಣ ಕರ್ನಾಟಕ (371 ಜೆ) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲಿಸಬೇಕು. ತಪ್ಪಿದಲ್ಲಿ, ಇಂಥವರು ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಸಿಬಿಎಸ್​ಇ 10,12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ

ಏಪ್ರಿಲ್​ 18 ರಂದು ಸಿಇಟಿ :ಇಂಜಿನಿಯರಿಂಗ್​ನ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ರಂದು ಸಿಇಟಿ ನಡೆಸಲಾಗುವುದು. ಇಂಥವರು ಅರ್ಜಿ ತುಂಬಲು ಸದ್ಯದಲ್ಲೇ ಪೋರ್ಟಲ್‌ ತೆರೆಯಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ರೀತಿಯಲ್ಲಿ ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್​ಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ಮತ್ತು 19 ರಂದು ಪಿಜಿಸಿಇಟಿ ನಡೆಸಲಾಗುವುದು. ಇವರಿಗೂ ಸಹ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಪೋರ್ಟಲ್‌ ತೆರೆಯಲಾಗುವುದು ಎಂದು ಹೇಳಿದ್ದಾರೆ.

ಶುಲ್ಕ ವಾಪಸ್ - ಸರಿಯಾದ ಬ್ಯಾಂಕ್‌ ವಿವರಕ್ಕೆ ಮನವಿ :2023ರಲ್ಲಿ ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಬಯಸಿ ನಂತರ ಸೀಟು ರದ್ದುಪಡಿಸಿಕೊಂಡಿರುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಆ ಬಾಬ್ತಿನ ಮೊತ್ತವನ್ನು ಹಿಂದಿರುಗಿಸುತ್ತಿದೆ. ಆದರೆ, ಕೆಲವರ ಅರ್ಜಿಗಳಲ್ಲಿ ಬ್ಯಾಂಕ್‌ ವಿವರಗಳು ತಪ್ಪಾಗಿದ್ದು, ಅಂತವರ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇಂಥವರು ಡಿ.31ರೊಳಗೆ ಸರಿಯಾದ ವಿವರ ನಮೂದಿಸಬೇಕು ಎಂದು ಪ್ರಾಧಿಕಾರವು ತಿಳಿಸಿದೆ‌.

ABOUT THE AUTHOR

...view details