ಬೆಂಗಳೂರು :ಕಬ್ಬನ್‌ಪಾರ್ಕ್ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್ ಹೊರಗಿಡಬೇಕು ಎನ್ನುವ ಬೇಡಿಕೆಯನ್ನು ತೋಟಗಾರಿಕಾ ಸಚಿವ ಮುನಿರತ್ನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕ್ಲಬ್ ಅಭಿವೃದ್ಧಿ ವಿಚಾರದಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೆಂಚುರಿ ಕ್ಲಬ್ನನ್ನು ಪಾರ್ಕ್ ಜೋನ್‌ನಿಂದ ಹೊರತು ಪಡಿಸಿರುವುದರಿಂದ ಇದರ ಅಭಿವೃದ್ಧಿ, ಪುನಶ್ಚೇತನ ಹಾಗೂ ನವೀಕರಣಕ್ಕೆ ಅಡಚಣೆ ಉಂಟಾಗುತ್ತಿರುವ ಕುರಿತು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕಬ್ಬನ್‌ಪಾರ್ಕ್ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್ ಕೈಬಿಡಬೇಕು ಎನ್ನುವ ಮನವಿ ಒಪ್ಪಲು ಸಾಧ್ಯವಿಲ್ಲ. ಕ್ಲಬ್ ಪಾರ್ಕ್ ವ್ಯಾಪ್ತಿಯಲ್ಲಿ ಇರುವುದರಿಂದ ಅಲ್ಲಿ ಏನೂ ಸಮಸ್ಯೆ ಇಲ್ಲ. ಈ ಒಂದು ಕ್ಲಬ್ ಜಾಗವನ್ನು ಪಾರ್ಕ್ ಜೋನ್ ವ್ಯಾಪ್ತಿಯಿಂದ ಕೈಬಿಟ್ಟರೆ ಪಾರಂಪರಿಕ ಕಟ್ಟಡ ಕೆಡವಲು ಪ್ರಸ್ತಾಪಗಳು ಬರಲಿದೆ.
ಸೆಂಚುರಿ ಕ್ಲಬ್ ಪ್ರವೇಶ ದ್ವಾರ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿದೆ. ಒಂದು ವೇಳೆ ಇದನ್ನು ಕೈಬಿಟ್ಟರೆ ಸಾರ್ವಜನಿಕರ ಸಂಚಾರಕ್ಕೆ ಲಭ್ಯವಿಲ್ಲದಂತಾಗಲಿದೆ. ಹಾಗಾಗಿ, ಈಗಿರುವ ಕಬ್ಬನ್‌ಪಾರ್ಕ್ ಜೋನ್ನಲ್ಲೇ ಸೆಂಚುರಿ ಕ್ಲಬ್ನನ್ನು ಮುಂದುವರೆಸಲಾಗುತ್ತದೆ. ಉದ್ಯಾನ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.