ಕರ್ನಾಟಕ

karnataka

By

Published : Apr 2, 2023, 2:31 PM IST

ETV Bharat / state

'ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಕೇಂದ್ರದಿಂದ ರಾಜ್ಯದ ಜನರಿಗೆ ಅನ್ಯಾಯ'

ಬಿಜೆಪಿ ಸರ್ಕಾರಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ದ್ರೋಹ ಬಗೆದಿವೆ ಎಂಬುದಕ್ಕೆ ಮಾ.31 ರವರೆಗೆ ಬಿಡುಗಡೆ ಮಾಡಿ ಖರ್ಚು ಮಾಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಕುರಿತ ದಾಖಲೆಗಳೆ ಹೇಳುತ್ತಿವೆ- ವಿಪಕ್ಷ ನಾಯಕ ಸಿದ್ದರಾಮಯ್ಯ.

Siddaramaiah
ಸಿದ್ದರಾಮಯ್ಯ

ಬೆಂಗಳೂರು:ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮೋದಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬೊಮ್ಮಾಯಿ ನೇತೃತ್ವದ ರಾಜ್ಯ ಮತ್ತು ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಗಳು ಸೇರಿಕೊಂಡು ಕಳೆದ 6 ತಿಂಗಳಲ್ಲಿ ನೂರಾರು ಕೋಟಿಯ ಜಾಹೀರಾತುಗಳನ್ನು ಬಿಡುಗಡೆ ಮಾಡಿವೆ. ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕ ಸ್ವರ್ಗ ಸಮಾನವಾಗಿ ಬಿಡುತ್ತದೆ ಎಂದು ನಂಬಿಸಲು ಭಾಷಣಗಳು ಮತ್ತು ಜಾಹೀರಾತುಗಳ ಆಶ್ರಯ ಪಡೆದಿದ್ದ ಬಿಜೆಪಿಗರು ಎಲ್ಲ ರಂಗದಲ್ಲೂ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. ಆದರೂ ಸಹ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಸಾಧನೆಗಳೇನು ಎಂಬುದನ್ನು ಈಗ ಸರ್ಕಾರದ ದಾಖಲೆಗಳೇ ಹೇಳುತ್ತಿವೆ. ಅದರಲ್ಲೂ ಮುಖ್ಯವಾಗಿ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಸೇರಿ ಅನುಷ್ಠಾನ ಮಾಡುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಡಬಲ್ ಎಂಜಿನ್ ಸರ್ಕಾರ ದಯನೀಯವಾಗಿ ಮಣ್ಣುಪಾಲು ಮಾಡಿದೆ. ಮೋದಿಯವರಾಗಲಿ ಅಥವಾ ಬಿಜೆಪಿಯ ಬೇರೆ ಯಾವ ನಾಯಕರಾಗಲಿ ಏನು ಹೇಳುತ್ತಾರೊ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸತ್ಯ ಅಡಗಿರುತ್ತದೆ ಎಂದು ನಾನು ಪದೇ ಪದೇ ಹೇಳಿದ್ದೇನೆ. ಈ ವಿಚಾರವನ್ನು ನಾಡಿನ ಯಾವ ನಾಗರಿಕರು ಬೇಕಿದ್ದರೂ ಸಾವಧಾನದಿಂದ ಪರೀಕ್ಷಿಸಬಹುದಾಗಿದೆ ಎಂದರು.

ಬಿಜೆಪಿ ಸರ್ಕಾರಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ದ್ರೋಹ ಬಗೆದಿವೆ ಎಂಬುದಕ್ಕೆ ಮಾ.31 ರವರೆಗೆ ಬಿಡುಗಡೆ ಮಾಡಿ ಖರ್ಚು ಮಾಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಕುರಿತ ದಾಖಲೆಗಳೆ ಹೇಳುತ್ತಿವೆ. ಎರಡೂ ಸರ್ಕಾರಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದ ಮೊತ್ತ 47,557 ಕೋಟಿ. (ಇದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9,041 ಕೋಟಿ ರೂಗಳು ಸೇರಿವೆ) ಎಂದಿದ್ದಾರೆ.

ಇದರಲ್ಲಿ ಮಾ.31 ರ ಅಂತ್ಯಕ್ಕೆ ಖರ್ಚು ಮಾಡಿದ್ದ ಮೊತ್ತ 23,735 ಕೋಟಿ ರೂ ಮಾತ್ರ. ಹಾಗಾಗಿ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಶೇ.49.9 ರಷ್ಟು ಮಾತ್ರ. ಮಾತಿಗೆ ಮೊದಲು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಅಮಿತ್ ಶಾ ಮತ್ತು ಮೋದಿಯವರನ್ನು ನಾನು ಕರ್ನಾಟಕದ ಜನರ ಪರವಾಗಿ ಕೇಳುತ್ತೇನೆ. ಕಳೆದ ವರ್ಷದ ಬಜೆಟ್‍ನಲ್ಲಿ ರಾಜ್ಯಕ್ಕೆ 21,435 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾ.31 ಕ್ಕೆ ಬಿಡುಗಡೆ ಮಾಡಿದ ಒಟ್ಟು ಮೊತ್ತ 13,339 ಕೋಟಿ.ರೂ ಮಾತ್ರ.

ವಾಪಸ್​ ಕೊಡುತ್ತಿರುವುದು ಬರೀ ಭಾಷಣ:ಮೊದಲನೆಯದಾಗಿ ಬಿಡುಗಡೆ ಮಾಡುತ್ತೇವೆಂದು ಹೇಳುವುದೆ ಕಡಿಮೆ. ಹೇಳಿದ ಮೇಲೆ ಬಿಡುಗಡೆ ಮಾಡುವುದು ಇನ್ನೂ ಕಡಿಮೆ. ನಿಮ್ಮ ಈ ಅವಮಾನ ಮತ್ತು ದ್ರೋಹವನ್ನು ಕರ್ನಾಟಕದ ಜನ ಯಾಕೆ ಸಹಿಸಬೇಕು?. 4.75 ಲಕ್ಷ ಕೋಟಿ ರೂಗಳಿಗೂ ಹೆಚ್ಚು ತೆರಿಗೆ ಮತ್ತು ಸುಂಕಗಳನ್ನು ನಮ್ಮ ರಾಜ್ಯದ ಜನರಿಂದ ಲೂಟಿ ಹೊಡೆಯುವ ನೀವು ನಮಗೆ ವಾಪಸ್​ ಕೊಡುತ್ತಿರುವುದು ಬರೀ ಭಾಷಣ ಮತ್ತು ಸುಳ್ಳು ಜಾಹೀರಾತುಗಳು ಮಾತ್ರ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಜನರ ಕಲ್ಯಾಣಗಳ ಬಗ್ಗೆ ಪುಟಗಟ್ಟಲೆ ಸುಳ್ಳು ಜಾಹೀರಾತು ನೀಡಿ ಪ್ರಚಾರ ಪಡೆಯುತ್ತವೆ. ಆದರೆ ವಾಸ್ತವಾಂಶ ಹೀಗಿದೆ. ಕೇಂದ್ರ ಸರ್ಕಾರ 2022-23 ಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ ರೂ.597 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾ.2023 ರ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ ರೂ.121 ಕೋಟಿ ಮಾತ್ರ. ಅದರಲ್ಲಿ ಪ್ರಧಾನ ಮಂತ್ರಿ ಅಭ್ಯುದಯ ಯೋಜನೆಗೆ (ಪಿ.ಎಂ.ಅಜಯ್) ರೂ.200 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಲಿಲ್ಲ.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ರೂ.121 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ಕೇವಲ ರೂ.49 ಕೋಟಿ ಮಾತ್ರ. ಪರಿಶಿಷ್ಟ ಪಂಗಡದ ಪ್ರೀ-ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.16 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಲಿಲ್ಲ. ಅಸ್ಪೃಶ್ಯತೆ ನಿವಾರಣೆಗಾಗಿ ರೂ.35 ಕೋಟಿ ಬಿಡುಗಡೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಬಿಡುಗಡೆ ಮಾಡಿದ್ದು ರೂ.8.75 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.32 ರಷ್ಟು ಪ್ರಗತಿಯಾಗಿದೆ. ಇದಲ್ಲದೇ ಇನ್ನೂ ಹಲವು ಇಲಾಖೆಯಲ್ಲಿ ಸಾಕಷ್ಟು ಅನುದಾನಗಳು ಬಾಕಿ ಉಳಿದಿದೆ.

ಜನರ ಕಲ್ಯಾಣಕ್ಕೆ ಮಣ್ಣೆರಚಿ ಅವಮಾನ: ಆದ್ದರಿಂದ ಕೇಂದ್ರ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಇನ್ನು ಮುಂದಾದರೂ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿ ರಾಜ್ಯದ ಜನರನ್ನು ಅವಮಾನ ಮಾಡುವುದನ್ನು ಬಿಟ್ಟು ತಾವು ಕರ್ನಾಟಕದ ಜನರಿಗೆ ಮಾಡಿರುವ ದ್ರೋಹಕ್ಕೆ ಕ್ಷಮೆ ಯಾಚಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಹಾಗೆಯೆ ತಮಗೆ ಸಿಕ್ಕ ಅಧಿಕಾರವನ್ನು ಕೇವಲ ಭ್ರಷ್ಟಾಚಾರಕ್ಕೆ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಜನರ ಕಲ್ಯಾಣಕ್ಕೆ ಮಣ್ಣೆರಚಿ ಅವಮಾನ ಮಾಡಿದೆ. ಆದ್ದರಿಂದ ತಾವು ಅಧಿಕಾರ ನಡೆಸಲು ಅಸಮರ್ಥರು ಎಂಬುದನ್ನು ರಾಜ್ಯ ಸರ್ಕಾರದ ಈ ದಾಖಲೆಗಳೆ ಹೇಳುತ್ತಿವೆ. ರಾಜ್ಯದ ಜನರ ಪರವಾಗಿ ಹೋರಾಟ ನಡೆಸದ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರುಗಳು ತಾವು ಯಾವ ರೀತಿಯಲ್ಲೂ ಕೆಲಸಕ್ಕೆ ಬಾರದವರು ಎಂಬುದನ್ನೂ ಸಹ ಈ ಅಂಕಿ-ಅಂಶಗಳು ಸಾರಿ ಸಾರಿ ಹೇಳುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಹೈಕಮಾಂಡ್ ವರುಣಾ ಸೂಚಿಸಿದೆ.. ನಾನು ಕೋಲಾರ ಕೂಡ ಕೇಳಿದ್ದೇನೆ : ಸಿದ್ದರಾಮಯ್ಯ

ABOUT THE AUTHOR

...view details