ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ವ್ಯಾಪಕವಾಗಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನ ಕೇಂದ್ರ ಅಧ್ಯಯನ ತಂಡದಿಂದ ಮಳೆ ಹಾನಿ ಪರಿಶೀಲನೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಕೆ ಮಾಡಲಿದ್ದಾರೆ. ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರದ ಮೂರು ಅಧ್ಯಯನ ತಂಡಗಳು ಸೆಪ್ಟೆಂಬರ್ 7,8,9 ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಹಾನಿ ಪರಿಶೀಲನೆ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ ಸಿಎಂ ಬೊಮ್ಮಾಯಿ ಜೊತೆ ಕೇಂದ್ರ ಅಧ್ಯಯನ ತಂಡ ಮಹತ್ವದ ಸಭೆ ನಡೆಸಲಿದೆ. ಕುಮಾರ ಕೃಪಾ ಅತಿಥಿಗೃಹದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದ ಮಳೆ ಹಾಗೂ ಹಾನಿ ಬಗ್ಗೆ ಸಿಎಂ ಮಾಹಿತಿ ಕೊಡಲಿದ್ದಾರೆ. ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆದ ನಂತರ ಮಳೆ ಹಾನಿ ಪ್ರದೇಶಗಳಲ್ಲಿ ತಂಡ ಪ್ರವಾಸ ಕೈಗೊಳ್ಳಲಿದೆ.
ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ, ಹಾವೇರಿ, ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ. ಆಗಸ್ಟ್ನಲ್ಲಿ ಸುರಿದ ಮಳೆಯ ಬಗ್ಗೆ ತಂಡ ಅಧ್ಯಯನ ಮಾಡಲಿದೆ. ಈಗಾಗಲೇ ಆಗಸ್ಟ್ನಲ್ಲಿ ಸುರಿದ ಮಳೆಯಿಂದಾಗಿ ಉಂಟಾಗಿರುವ 11 ಸಾವಿರ ಕೋಟಿ ನಷ್ಟದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ತಂಡ ಆಗಮಿಸಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ಆಗಿರುವ ಹಾನಿ ಬಗ್ಗೆಯೂ ನಾಳೆ ಕೇಂದ್ರದ ಅಧ್ಯಯನ ತಂಡದ ಜೊತೆ ಚರ್ಚಿಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.
ತಂಡದ ವಿವರ:ಆಶೀಶ್ ಕುಮಾರ್, ಅಶೋಕ್ ಕುಮಾರ್ ಮತ್ತು ಡಾ ಕೆ. ಮನೋಹರನ್ ನೇತೃತ್ವದ ತಂಡಗಳು ಪ್ರವಾಸ ಕೈಗೊಳ್ಳುತ್ತಿವೆ. ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಆಶೀಶ್ ಕುಮಾರ್ ನೇತೃತ್ವದ ತಂಡ ಪ್ರವಾಸ ಮಾಡಲಿದೆ. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಅಶೋಕ್ ಕುಮಾರ್ ನೇತೃತ್ವದ ತಂಡ ಪ್ರವಾಸ ಕೈಗೊಳ್ಳಲಿದೆ. ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಡಾ. ಮನೋಹರನ್ ನೇತೃತ್ವದ ತಂಡ ಪ್ರವಾಸ ಮಾಡಲಿದೆ.
ಇದನ್ನೂ ಓದಿ :ಪಿಎಸ್ಐ ನೇಮಕಾತಿ ಅಕ್ರಮ: ಬಿಜೆಪಿ ಶಾಸಕ ದಡೇಸಗೂರ್ ವಿರುದ್ಧ ತನಿಖೆ ಸುಳಿವು ನೀಡಿದ ಸಿಎಂ