ಬೆಂಗಳೂರು : ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಹಿನ್ನೆಲೆ ರಾಜ್ಯಕ್ಕೆ ಕೇಂದ್ರದ ನೆರೆಹಾನಿ ಅಧ್ಯಯನ ತಂಡ ಭೇಟಿ ನೀಡಲಿದೆ. ಸೆ.4ರಿಂದ ಸೆ.7ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಅಧ್ಯಯನ ನಡೆಸಲಿದೆ.
ಸೆ. 4ಕ್ಕೆ ನೆರೆ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಏಳು ಸದಸ್ಯರ ಕೇಂದ್ರದ ಅಧಿಕಾರಿಗಳ ನಿಯೋಗ ಮೂರು ಪ್ರತ್ಯೇಕ ತಂಡಗಳಾಗಿ ನೆರೆ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಸೆ. 4ಕ್ಕೆ ಸಂಜೆ ನಾಲ್ಕು ಗಂಟೆಗೆ ಸಿಎಂ ಜೊತೆ ತಂಡ ಸಭೆ ನಡೆಸಲಿದೆ. ಸೆಪ್ಟೆಂಬರ್ 5 ಮತ್ತು 6ರಂದು ಎರಡು ದಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ.
ಮೂರು ಸದಸ್ಯರ ತಂಡ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಎರಡು ಸದಸ್ಯರ ತಂಡ ಹಾಗೂ ಧಾರವಾಡ ಮತ್ತು ಬಾಗಲಕೋಟೆಗೆ ಎರಡು ಸದಸ್ಯರ ಪ್ರತ್ಯೇಕ ತಂಡ ಭೇಟಿ ನೀಡಿ ನೆರೆ ಹಾನಿಯ ಅಧ್ಯಯನ ನಡೆಸಲಿದೆ. ಸೆ.7ಕ್ಕೆ ಅಧ್ಯಯನ ತಂಡ ವಾಪಸ್ ತೆರಳಲಿದೆ.