ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಮುಂದುವರಿದಿದೆ. ಮೈಸೂರು ಆಡಳಿತ ಕಾಲದಿಂದ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಕರ್ನಾಟಕದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಸಲ್ಲಿಸಿದೆ. ಬಿಬಿಎಂಪಿ ವಿಶೇಷ ಆಯುಕ್ತ ಶ್ರೀನಿವಾಸ ಅವರಿಗೆ ಸುಪ್ರೀಂಕೋರ್ಟ್ ಆದೇಶ, ಮೈಸೂರು ರಾಜ್ಯ ವಕ್ಫ್ ಮಂಡಳಿಯಿಂದ 1965ರ ಅಧಿಕೃತ ಗೆಜೆಟ್ ಅಧಿಸೂಚನೆ ಸೇರಿದಂತೆ ಇನ್ನಿತರ ಹಳೆಯ ದಾಖಲೆಗಳ ಪ್ರತಿಗಳನ್ನು ಕಳುಹಿಸಲಾಗಿದೆ.
1965ರ ಜೂನ್ 7ರಂದೇ ವಕ್ಫ್ ಗೆಜೆಟ್ ಅಧಿಸೂಚನೆಯ ಅಡಿಯಲ್ಲಿ ಈದ್ಗಾ ಪ್ರದೇಶವನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ ಎಂದು ಅಸೋಸಿಯೇಷನ್ ತಿಳಿಸಿದೆ. ದಾಖಲೆಗಳ ಪ್ರಕಾರ, ಕ್ರಮ ಸಂಖ್ಯೆ 137ರಲ್ಲಿ ಚಾಮರಾಜಪೇಟೆಯ ಈದ್ಗಾ ಸುನ್ನಿ 2 ಎಕರೆ 5 ಗುಂಟಾ ಜಮೀನು ಇದ್ದು, ಇದರ ಮಾಲೀಕತ್ವ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಆಫ್ ಕರ್ನಾಟಕದ ಕಾರ್ಯದರ್ಶಿಗೆ ವಹಿಸಲಾಗಿದೆ.