ಬೆಂಗಳೂರು: ಯುವರಾಜ್ ಸ್ವಾಮಿ ಮಾಡಿರುವ ಅವ್ಯವಹಾರಕ್ಕೂ ಬಿಜೆಪಿ ನಾಯಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು, ನಾಯಕರ ಜೊತೆ ಫೋಟೊ ತೆಗೆಸಿಕೊಳ್ಳೋದು ಈಗ ಸಾಮಾನ್ಯ ವಿಚಾರವಾಗಿದೆ. ಬಂದವರಿಗೆ ಫೋಟೊ ತೆಗೆಸಿಕೊಳ್ಳಬೇಡಿ ಅಂತ ಹೇಳುವುದಕ್ಕಾಗಲ್ಲ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ನಾವು ರಸ್ತೆಯಲ್ಲಿ ಹೋಗಬೇಕಾದರೆ, ಹುಬ್ಬಳ್ಳಿಗೆ ಹೋದಾಗ ಹಲವರು ಫೋಟೊ ತೆಗೆಸಿಕೊಳ್ಳುತ್ತಾರೆ. ಫೋಟೊ ತೆಗೆಸಿಕೊಳ್ಳೋಕೆ ಬಂದಾಗ, ನೀನ್ಯಾರು, ಎಲ್ಲಿಂದ ಬಂದಿದೀಯಾ, ತುಮಕೂರಿಂದ ಬಂದಿದೀಯಾ, ಬೆಂಗಳೂರಿಂದ ಬಂದಿದೀಯಾ ಅಂತಾ ಕೇಳುವುದಕ್ಕೆ ಆಗಲ್ಲ ಎಂದು ಬಿಜೆಪಿ ನಾಯಕರ ಜೊತೆ ಯುವರಾಜ್ ಸ್ವಾಮಿ ಇರುವ ಫೋಟೋಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಫೋಟೊಗಳ ಆಧಾರದಲ್ಲಿ ಬಿಜೆಪಿ ನಾಯಕರ ಬಗ್ಗೆಯೂ ಆರೋಪ ಬರುತ್ತಿರುವ ಹಿನ್ನೆಲೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸಚಿವರು ಆತನೊಂದಿಗೆ ಬಿಜೆಪಿ ನಾಯಕರ ನಂಟಿದೆ ಎನ್ನುವ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದರು.