ಬೆಂಗಳೂರು: 10 ವರ್ಷಗಳ ಹಿಂದೆ ಭಾರತವನ್ನು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎನ್ನಲಾಗುತ್ತಿತ್ತು. ಆದರೆ ಇಂದು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮಾಹಿತಿಯ ಆರ್‍ಸಿ ಡಿಜಿಟಲ್ ವಾಹನ ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರ ವಾರ್ಡ್ಗೆ ಆಗಮಿಸಿದ ವೇಳೆ ಸಚಿವರು ಮಾತನಾಡಿದರು.
ಸಂಪದ್ಭರಿತ ರಾಷ್ಟ್ರ ಮತ್ತು ಅಗಾಧ ಮಾನವ ಸಂಪನ್ಮೂಲವಿರುವ ಭಾರತವನ್ನು ಸ್ವಾತಂತ್ರ್ಯಾ ನಂತರದ 75 ವರ್ಷಗಳ ಬಳಿಕವೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಕರೆಯಲಾಗುತ್ತಿದೆ. 10 ವರ್ಷಗಳಿಂದ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುವತ್ತ ದೊಡ್ಡ ಹೆಜ್ಜೆ ಇಡಲಾಗಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಎರಡು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇವೆ. ಈಗಾಗಲೇ ನಮ್ಮ ದೇಶ ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದರು.
10, 11 ವರ್ಷಗಳ ಹಿಂದೆ 2009-14ರ ನಡುವಿನ ಅವಧಿಯಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೆವು. ಆಗ ಸಂಸತ್ತಿನಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯ ಗಂಭೀರ ಸ್ವರೂಪ, ಭಾರತದ ಬ್ಯಾಂಕ್‍ಗಳ ಎನ್‍ಪಿಎ ಪರಿಣಾಮದ ಚರ್ಚೆ ನಡೆದಿತ್ತು. ಭಾರತವು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದು ಬಿಂಬಿತವಾಗಿತ್ತು.
ಆದರೆ ಈಗ ಇಂಗ್ಲೆಂಡನ್ನೂ ನಾವು ಹಿಂದಿಕ್ಕೆ ಐದನೇ ಸ್ಥಾನ ಪಡೆದಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಅಮೆರಿಕ, ಚೀನಾದ ಬಳಿಕ ನಮ್ಮ ಸ್ಥಾನ ಇರಲಿದೆ. ಮುಂದಿನ ವರ್ಷ ಈ ಹೊತ್ತಿಗೆ ನಾವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.