ಬೆಂಗಳೂರು:ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆಸ್ ಇಂದು ಕರೆ ನೀಡಿರುವ ಪ್ರತಿಭಟನೆಯಲ್ಲಿ ಜೆಡಿಎಸ್ ಕೂಡಾ ಪಾಲ್ಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರಪಯೋಗ ಮಾಡಿಕೊಳ್ಳುತ್ತಿದ್ದು, ಈ ಪ್ರಕರಣದಲ್ಲಿ ಪ್ರತಿ ಸಲಿ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ವಿಚಾರಣೆಗೆ ಅವರು ಹಾಜರಾಗಿದ್ದಾರೆ. ಆದರೂ ಅವರನ್ನ ಬಂಧನ ಮಾಡುವ ಅವಶ್ಯಕತೆ ಏನಿತ್ತು. ತಮ್ಮ ಅನುಕೂಲಕ್ಕಾಗಿ ಅಧಿಕಾರಿಗಳನ್ನ ಕೇಂದ್ರ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಡಿಕೆಶಿ ಬಂಧನಕ್ಕೆ ಹೆಚ್ಡಿಕೆ ಆಕ್ರೋಶ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡಿ, ಆದಾಯ ತೆರಿಗೆ ಇಲಾಖೆ ಮತ್ತಿತರ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಹಣಿಯುವಲ್ಲಿ ನಿರತವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೂಲೆಯಾಗುತ್ತಿದೆ ಎಂದು ಟೀಕಿಸಿದರು.
ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದರಿಂದ ಡಿಕೆ ಶಿವಕುಮಾರ್ ಅವರಿಗೆ ಇಂತಹ ಸ್ಥಿತಿ ಬಂದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ನಡೆಯಲಿರುವ ಹೋರಾಟದಲ್ಲಿ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಡಿಸಿಎಂ ಅಶ್ವಥ್ ನಾರಾಯಣ ಅವರ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ, ಮಲ್ಲೇಶ್ವರಂನಲ್ಲಿ ಅವರು ಏನೇನ್ ಲೂಟಿ ಹೊಡೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷ ರಾಜಕೀಯ ಮಾಡಲ್ಲ ಎನ್ನುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಆಗುತ್ತಿರುವುದು ಏನು? ಫೋನ್ ಕದ್ದಾಲಿಕೆ ನಡೆದಿದೆ ಅಂತ ತನಿಖೆಗೆ ಆದೇಶ ನೀಡಿದ್ದಾರೆ. ಯಾವ್ ತನಿಖೆ ಆದರೂ ಮಾಡಲಿ ಸಿಬಿಐ ಅಲ್ಲ, ಇಂಟರ್ ನ್ಯಾಷನಲ್ ಸಂಸ್ಥೆಯಿಂದ ತನಿಖೆ ಮಾಡಿಸಲಿ ನನಗೇನು ಭಯವಿಲ್ಲ ಎಂದು ಗುಡುಗಿದರು.