ಕರ್ನಾಟಕ

karnataka

ETV Bharat / state

ಗಾಯದ ಮೇಲೆ ಬರೆ: ಆರಂಭಿಕ ತ್ರೈಮಾಸಿಕದಲ್ಲಿ ಕೇಂದ್ರ ಬಿಡುಗಡೆಗೊಳಿಸುವ ತೆರಿಗೆ ಪಾಲು, ಸಹಾಯಧನಕ್ಕೂ ಕತ್ತರಿ! - Central Govt Tax cut

ಆರ್ಥಿಕ ವರ್ಷ 2021-22ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಹಾಗೂ ಸಹಾಯಧನಕ್ಕೂ ಕತ್ತರಿ ಬಿದ್ದಿದೆ.

vidhanasoudha
ವಿಧಾನಸೌಧ

By

Published : Aug 2, 2021, 8:51 PM IST

ಬೆಂಗಳೂರು: ಪದೇ ಪದೆ ಲಾಕ್‌ಡೌನ್​ನಿಂದ ರಾಜ್ಯದ ಬೊಕ್ಕಸ ಪಾತಾಳಕ್ಕೆ ಇಳಿದಿರುವುದು ಗೊತ್ತಿರುವ ವಿಚಾರ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಗಾಯದ‌ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ತೆರಿಗೆ ಪಾಲು ಹಾಗೂ ಸಹಾಯಧನಕ್ಕೂ ಕಳೆದ ಮೂರು ತಿಂಗಳಲ್ಲಿ ಕತ್ತರಿ ಬಿದ್ದಿದೆ.

ಈಗಾಗಲೇ ರಾಜ್ಯದ ಬೊಕ್ಕಸ ಕೋವಿಡ್ ಹಾಗೂ ಲಾಕ್‌ಡೌನ್​ಗಳಿಗೆ ಸೊರಗಿ ಹೋಗಿದೆ. ತಕ್ಷಣಕ್ಕೆ ಆರ್ಥಿಕತೆ ಸಂಪೂರ್ಣ ಚೇತರಿಕೆ ಕಾಣುವ ಲಕ್ಷಣ ಗೋಚರವಾಗುತ್ತಿಲ್ಲ. 3ನೇ ಅಲೆಯ ಭೀತಿ ಎದುರಾಗಿರುವ ಈ ಸಂದರ್ಭ ಸಂಪೂರ್ಣ ಅನ್‌ಲಾಕ್ ಸದ್ಯಕ್ಕಂತೂ ಇಲ್ಲ. 2ನೇ ಅಲೆಯ ಪೆಟ್ಟಿನಿಂದ ರಾಜ್ಯ ಅಕ್ಷರಶಃ ನಲುಗಿ ಹೋಗಿದೆ. ಇತ್ತ 2ನೇ ಅಲೆಯ ವೇಗಕ್ಕೆ ಅಂಕುಶ ಹಾಕಲು ಸುಮಾರು ಎರಡು ತಿಂಗಳು ಲಾಕ್‌ಡೌನ್ ಹೇರಿತ್ತು. ಇದರಿಂದ ಮೊದಲ ಲಾಕ್‌ಡೌನ್ ನಿಂದ ಚೇತರಿಕೆ ಕಾಣುತ್ತಿದ್ದ ರಾಜ್ಯದ ಆದಾಯಕ್ಕೆ ಮತ್ತೆ ದೊಡ್ಡ ಕೊಡಲಿ ಏಟು ಬಿದ್ದಂತಾಗಿದೆ.

ಬಹುತೇಕ ಆದಾಯ ತೆರಿಗೆ ಮೂಲಗಳು ಬರಿದಾಗಿದೆ. ತಕ್ಷಣಕ್ಕೆ ರಾಜ್ಯದ ಮುಂದಿರುವ ಆಶಾ ಕಿರಣ ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನ. ಆದರೆ, 2021-22ನೇ ಸಾಲಿನ ಆರಂಭದಲ್ಲೇ ಕೊರೊನಾ - ಲಾಕ್​​ಡೌನ್​ ರಾಜ್ಯದ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕಕ್ಕೆ ಆರಂಭಿಕ ಆಘಾತ ನೀಡಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಹೊರಬರಲು ಇದ್ದ ಏಕೈಕ ಆಶಾಕಿರಣ ಕೇಂದ್ರ‌ ಸರ್ಕಾರದ ತೆರಿಗೆ ಪಾಲು. ಆದರೆ, ಕಳೆದ ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರವೂ ಕೈ ಕೊಟ್ಟಂತಿದೆ.

ಕೇಂದ್ರ ಬಿಡುಗಡೆ ಮಾಡುವ ಸಹಾಯಾನುದಾನಕ್ಕೆ ಕತ್ತರಿ:ಆರ್ಥಿಕ ವರ್ಷ 2021-22ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಹಾಗೂ ಸಹಾಯಧನಕ್ಕೆ ಕತ್ತರಿ ಬಿದ್ದಿದೆ.

ಸ್ವಂತ ರಾಜಸ್ವ ಸಂಗ್ರಹದಲ್ಲಿ ಹಿಂದೆ ಬಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ಕೇಂದ್ರದಿಂದ ಹಣ ಬಾರದೇ ಇರುವುದು ದೊಡ್ಡ ಪೆಟ್ಟು ನೀಡಿದೆ. ಆರ್ಥಿಕ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ, ಕೇಂದ್ರ ಸರ್ಕಾರ 2021-22 ಸಾಲಿನಲ್ಲಿ ರಾಜ್ಯಕ್ಕೆ 24,273 ಕೋಟಿ ರೂ. ತೆರಿಗೆ ಪಾಲಿನ ಹಂಚಿಕೆ ಮಾಡಿದೆ. ಅದೇ ಕೇಂದ್ರದ ಸಹಾಯಾನುದಾನ ರೂಪದಲ್ಲಿ 28,246 ಕೋಟಿ ರೂ. ಹಂಚಿಕೆ ಮಾಡಿದೆ. ಈ ಹಣವನ್ನು ಕೆಂದ್ರ ಸರ್ಕಾರ ಪ್ರತಿ ತಿಂಗಳು ಕಂತುಗಳಲ್ಲಿ ಬಿಡುಗಡೆ ಮಾಡುತ್ತದೆ. ಆದರೆ, ಈ ಬಾರಿ‌ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕಂತಿನ ಮೊತ್ತಕ್ಕೆ ಕತ್ತರಿ ಹಾಕಿದೆ.

ಏಪ್ರಿಲ್ ತಿಂಗಳಲ್ಲಿ ಕೇಂದ್ರ ತೆರಿಗೆ ಪಾಲಿನ ಮೊತ್ತವಾಗಿ ಕರ್ನಾಟಕಕ್ಕೆ 1429 ಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ವರ್ಷ ಇದೇ ತಿಂಗಳು ಕೇಂದ್ರ ಸರ್ಕಾರ 1679 ಕೋಟಿ ರೂ.‌ಬಿಡುಗಡೆ ಮಾಡಿತ್ತು. ಅಂದರೆ, ಈ‌ ಬಾರಿ ಬಿಡುಗಡೆಯಲ್ಲಿ ಶೇ14.90ರಷ್ಟು ಕಡಿತವಾಗಿದೆ. ಮೇ ತಿಂಗಳಲ್ಲಿ 1428 ಕೋಟಿ ರೂ. ಬಿಡುಗಡೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14.89ರಷ್ಟು ಕಡಿತವಾಗಿದೆ. ಇನ್ನು ಜೂನ್ ತಿಂಗಳಲ್ಲಿ ಕೇಂದ್ರದ ತೆರಿಗೆ ಪಾಲಿನ ರೂಪದಲ್ಲಿ 1429 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.30 ರಷ್ಟು ಬಿಡುಗಡೆ ಕಡಿತವಾಗಿದೆ.

ಅದೇ ರೀತಿ ಕೇಂದ್ರ ಸರ್ಕಾರದ ಸಹಾಯಧನದ ಬಿಡುಗಡೆಯಲ್ಲೂ ಈ ಮೂರು ತಿಂಗಳಲ್ಲಿ ಭಾರಿ ಕಡಿತವಾಗಿದೆ. ಏಪ್ರಿಲ್ ತಿಂಗಳಲ್ಲಿ ಕೇವಲ 544 ಕೋಟಿ ರೂ. ಬಿಡುಗಡೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 83.81 ರಷ್ಟು ಕಡಿತವಾಗಿದೆ. ಇನ್ನು ಮೇ ತಿಂಗಳಲ್ಲಿ 1654 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 45.63 ರಷ್ಟು ಇಳಿಕೆಯಾಗಿದೆ. ಅದೇ ರೀತಿ ಜೂನ್ ತಿಂಗಳಲ್ಲಿ ರಾಜ್ಯಕ್ಕೆ 5233 ಕೋಟಿ ರೂ. ಕೇಂದ್ರದ ಸಹಾಯಧನ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೂರು ತಿಂಗಳಲ್ಲಿ ಒಟ್ಟು ಶೇ 29 ರಷ್ಟು ಸಹಾಯನುದಾನ ಬಿಡುಗಡೆಯಲ್ಲಿ ಕಡಿತವಾಗಿದೆ.

ಜಿಎಸ್​ಟಿ ಪರಿಹಾರ ಮೊತ್ತದತ್ತ ನಿರೀಕ್ಷೆಯ ಕಣ್ಣು:ಇತ್ತ ಕೇಂದ್ರ ಸರ್ಕಾರ ಕಳೆದ ವರ್ಷದ ಜಿಎಸ್​ಟಿ ಪರಿಹಾರ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಆರ್ಥಿಕವಾಗಿ ಸೊರಗಿರುವ ರಾಜ್ಯಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

2020-21ನೇ ಸಾಲಿನಲ್ಲಿ ರಾಜ್ಯದ ಜಿಎಸ್​ಟಿ ಪರಿಹಾರ ಮೊತ್ತದ ಪಾಲು 24,000 ಕೋಟಿ ರೂ. ಆಗಿತ್ತು. ಈ ಪೈಕಿ ಕಳೆದ ವರ್ಷ ಕೇಂದ್ರ ಸರ್ಕಾರ 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ಬಿಡುಗಡೆ ಮಾಡಿತ್ತು. ಇನ್ನೂ 11 ಸಾವಿರ ಕೋಟಿ ರೂ. ಗಳಷ್ಟು ಜಿಎಸ್​ಟಿ ಪರಿಹಾರ ಹಣ ಬಿಡುಗಡೆಯಾಗಬೇಕಿದೆ. ಈ ಹಣ ಆದಷ್ಟು ಬೇಗ ಬಿಡುಗಡೆಗೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.

ಅದೇ ರೀತಿ ಈ ವರ್ಷ ಕೇಂದ್ರ ಸರ್ಕಾರ ನೀಡಬೇಕಾದ ಜಿಎಸ್​ಟಿ ಪರಿಹಾರ ಮೊತ್ತದ ಬಾಬ್ತಿನಲ್ಲಿ ಕರ್ನಾಟಕಕ್ಕೆ 18,109 ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡಲಿದೆ. ಕಳೆದ ಬಾರಿಯಂತೆ ಈ ಬಾರಿನೂ ಕರ್ನಾಟಕ ಜಿಎಸ್​ಟಿ ಪರಿಹಾರದ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರವೇ ಸಾಲ ಎತ್ತುವಳಿ ಮಾಡಿ ರಾಜ್ಯಕ್ಕೆ ಬಿಡುಗಡೆ ಮಾಡಲಿದೆ. ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಈ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಿದೆ.

ಓದಿ:ಪೊಲೀಸ್ ಠಾಣೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ: DGP ಪ್ರವೀಣ್ ಸೂದ್ ಆದೇಶ

ABOUT THE AUTHOR

...view details