ಕರ್ನಾಟಕ

karnataka

ETV Bharat / state

ಕೇಂದ್ರದ ಮುಂದೆ ರಾಜ್ಯದ ಬರ ಪರಿಹಾರದ ಮೊರೆ: ನೆರೆ -ಬರ ಬೆಟ್ಟದಷ್ಟು.. ಬಿಡುಗಡೆಯಾಗಿದ್ದು ಮಾತ್ರ ಎಳ್ಳಷ್ಟು!

ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರಾಜ್ಯಕ್ಕೆ ಸಾಕಷ್ಟು ನಷ್ಟವಾಗಿದ್ದರೂ, ಕೇಂದ್ರದಿಂದ ಬರುತ್ತಿರುವ ವಿಪತ್ತು ನೆರವು ಮಾತ್ರ ಕಡಿಮೆಯಾಗಿದೆ.

ವಿಧಾನಸೌಧ
ವಿಧಾನಸೌಧ

By ETV Bharat Karnataka Team

Published : Nov 13, 2023, 10:51 PM IST

ಬೆಂಗಳೂರು : ಕರ್ನಾಟಕ ಈ ಬಾರಿ ತೀವ್ರ ಬರಗಾಲ ಎದುರಿಸುತ್ತಿದೆ. ಮೂರು ನಾಲ್ಕು ವರ್ಷಗಳ ಸತತ ಅತಿವೃಷ್ಟಿಯ ಬಳಿಕ ಇದೀಗ ರಾಜ್ಯ ಇದೀಗ ತೀವ್ರ ಅನಾವೃಷ್ಠಿ ಅನುಭವಿಸುತ್ತಿದೆ. ಬರದ ಬರೆಗೆ ತತ್ತರಿಸಿರುವ ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊರೆ ಇಟ್ಟಿದೆ. ಆದರೆ, ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರಾಜ್ಯಕ್ಕೆ ಬೆಟ್ಟದಷ್ಟು ನಷ್ಟವಾದರೂ, ಕೇಂದ್ರದಿಂದ ಬರುವ ವಿಪತ್ತು ನೆರವು ಮಾತ್ರ ಎಳ್ಳಷ್ಟಾಗಿದೆ.

ಕರ್ನಾಟಕ ಈ ಬಾರಿ ಭಾರೀ ಬರಗಾಲ ಎದುರಿಸುತ್ತಿದೆ. ಕಳೆದ ಮೂರು ನಾಲ್ಕು ವರ್ಷಗಳಲ್ಲಿನ ಅತೀವ ಮಳೆಯ ಅತಿವೃಷ್ಠಿಯ ಬಳಿಕ ಇದೀಗ ಮತ್ತೆ ಬರಕ್ಕೆ ತುತ್ತಾಗಿದೆ.‌ ಈ ಬಾರಿ ರಾಜ್ಯದಲ್ಲಿನ ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಬರದ ಬರೆಯ ತೀವ್ರತೆ ಏನಿದೆ ಎಂಬುದು ಗೊತ್ತಾಗುತ್ತೆ. ಬರದಿಂದಾಗಿ ರಾಜ್ಯ ಸುಮಾರು 46 ಲಕ್ಷ ಹೆಕ್ಟೇರ್​ನಷ್ಟು ಬೆಳೆ ನಷ್ಟ ಅನುಭವಿಸಿದೆ. ಒಟ್ಟು 33,770.10 ಕೋಟಿ ರೂ. ಬರ ನಷ್ಟ ಅಂದಾಜಿಸಿದೆ. ಈ ಪೈಕಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ನಡಿ 17,901.73 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಿದೆ.

ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಮೆಮೊರಾಂಡಂ ಸಲ್ಲಿಸಿದ್ದು, ಕೇಂದ್ರದ ಬರ ಅಧ್ಯಯನ ತಂಡವೂ ಪರಿಶೀಲನೆ ನಡೆಸಿ ತೆರಳಿದೆ. ಆದರೂ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಕೇಂದ್ರದ ಸಚಿವರು ರಾಜ್ಯದ ಪರಿಹಾರದ ಮನವಿಗೆ ಸ್ಪಂದಿಸಿಲ್ಲ ಎಂದು ರಾಜ್ಯ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಇತ್ತ ಪರಿಹಾರ ಸಂಬಂಧ ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಮಧ್ಯೆ ಕೆಸರೆರಚಾಟವೂ ತಾರಕ್ಕೇರಿದೆ. ಆದರೆ ಈ ಹಿಂದಿನ ಅಂಕಿ-ಅಂಶ ನೋಡಿದರೆ ರಾಜ್ಯ ಬರದಿಂದ ಹಾಗೂ ನೆರೆಯಿಂದ ಅನುಭವಿಸಿದ ನಷ್ಟ ಬೆಟ್ಟದಷ್ಟಿದ್ದರೂ ಕೇಂದ್ರ NDRFನಡಿ ಬಿಡುಗಡೆ ಮಾಡಿರುವ ವಿಪತ್ತು ಪರಿಹಾರ ಮಾತ್ರ ಅತ್ಯಲ್ಪವಾಗಿದೆ.

ಮೂರು ವರ್ಷದ ನೆರೆಹಾನಿಗೆ ಕೇಂದ್ರ ನೀಡಿದ್ದು 3,965 ಕೋಟಿ ರೂ : 2019-20 ರಿಂದ 2021-22ರವರೆಗೆ ರಾಜ್ಯದಲ್ಲಿ ತೀವ್ರ ಮಳೆಯಿಂದ ಅತಿವೃಷ್ಟಿ ಉಂಟಾಗಿತ್ತು. ಮೂರು ವರ್ಷಗಳಲ್ಲಿ ಉಂಟಾದ ಮಳೆ ಹಾನಿಗೆ ಸುಮಾರು 78,395 ಕೋಟಿ ರೂ.ನಷ್ಟು ನಷ್ಟ ಅನುಭವಿಸಿತ್ತು. ರಾಜ್ಯ ಸರ್ಕಾರ NDRF ಮಾರ್ಗಸೂಚಿಯಂತೆ ಕೇಂದ್ರದಿಂದ ಮೂರು ವರ್ಷಗಳಲ್ಲಿ ಒಟ್ಟು 8,277 ಕೋಟಿ ರೂ. ನೆರೆ ಪರಿಹಾರ ಹಣ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಅಳೆದು ತೂಗಿ ರಾಜ್ಯಕ್ಕೆ ನೀಡಿದ ನೆರೆ ಪರಿಹಾರ ಒಟ್ಟು 3,965 ಕೋಟಿ ರೂ. ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಕಂದಾಯ ಇಲಾಖೆ ‌ನೀಡಿದ ಅಂಕಿ - ಅಂಶದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ NDRF ಮೂಲಕ 2019 ಆಗಸ್ಟ್ ಪ್ರವಾಹ ಪರಿಹಾರಕ್ಕಾಗಿ 1,652.85 ಕೋಟಿ ರೂ. ಬಿಡುಗಡೆ ಮಾಡಿತ್ತು. 2020 ಆಗಸ್ಟ್ ಪ್ರವಾಹ ಪರಿಹಾರಕ್ಕಾಗಿ 577.84 ಕೋಟಿ ರೂ. ನೀಡಿತ್ತು. 2020 ಸೆಪ್ಟೆಂಬರ್-ಅಕ್ಟೋಬರ್ ಪ್ರವಾಹ ಪರಿಹಾರಕ್ಕಾಗಿ 740.46 ಕೋಟಿ ರೂ. ಬಿಡುಗಡೆ ಮಾಡಿತ್ತು. ಇನ್ನು 2021 ಜುಲೈ ಪ್ರವಾಹ ಪರಿಹಾರವಾಗಿ 501.88 ಕೋಟಿ ರೂ. ಹಾಗೂ 2021ರ ಅಕ್ಟೋಬರ್-ನವೆಂಬರ್ ಪ್ರವಾಹ ಪರಿಹಾರವಾಗಿ 492.39 ಕೋಟಿ ರೂ. ಬಿಡುಗಡೆ ಮಾಡಿತ್ತು.

ಕಂದಾಯ ಇಲಾಖೆ ನೀಡಿದ ಅಂಕಿ - ಅಂಶದಂತೆ SDRFನಡಿ ರಾಜ್ಯ ಸರ್ಕಾರ ನೆರೆ ಪರಿಹಾರವಾಗಿ 2019-20ರಲ್ಲಿ 1,792.55 ಕೋಟಿ ರೂ. ಬಿಡುಗಡೆ ಮಾಡಿತ್ತು. ಇನ್ನು 2020-21ರಲ್ಲಿ ರಾಜ್ಯ ಸರ್ಕಾರ ಎಸ್​ಡಿಆರ್​ಎಫ್ ಮೂಲಕ 1,546.29 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು 2021-22ರಲ್ಲಿ ರಾಜ್ಯ ಸರ್ಕಾರ 3,522.22 ಕೋಟಿ ರೂ. ಬಿಡುಗಡೆ ಮಾಡಿತ್ತು. ಆ ಮೂಲಕ ರಾಜ್ಯ ಸರ್ಕಾರ SDRFನಡಿ ಒಟ್ಟು 6,861 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿತ್ತು.

ಒಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ಸತತವಾಗಿ ಸುರಿದ ಮಳೆಯಿಂದ ರಾಜ್ಯ ಸರ್ಕಾರದ ವರದಿಯಂತೆ ಬರೋಬ್ಬರಿ 78,395 ಕೋಟಿ ರೂ. ನೆರೆ ಹಾನಿ ಸಂಭವಿಸಿತ್ತು. ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ SDRFನಡಿ 6,861 ಕೋಟಿ ರೂ. ಬಿಡುಗಡೆ ಮಾಡಿತ್ತು.‌ ಇತ್ತ NDRFನಡಿ ಕೇಂದ್ರ ಸರ್ಕಾರ 3,965 ಕೋಟಿ ರೂ‌. ಪರಿಹಾರ ಬಿಡುಗಡೆ ಮಾಡಿತ್ತು. ಆ ಮೂಲಕ ಮೂರು ವರ್ಷಗಳಲ್ಲಿ ಸಂಭವಿಸಿದ 78,395 ಕೋಟಿ ರೂ. ನೆರೆ ಹಾನಿಗೆ ಪ್ರತಿಯಾಗಿ ಪರಿಹಾರ ಹಣವಾಗಿ ಬಿಡುಗಡೆಯಾಗಿದ್ದು, ಕೇವಲ 10,826.48 ಕೋಟಿ ರೂ. ಮಾತ್ರ.

ಬರದ ಮೊರೆಗೆ ಕೇಂದ್ರದಿಂದ ಅತ್ಯಲ್ಪ ಪರಿಹಾರ:ಮೂರು ವರ್ಷಗಳ ಸತತ ಅತಿವೃಷ್ಟಿ ಬಳಿಕ ಈ ಬಾರಿ ರಾಜ್ಯ ಮತ್ತೆ ತೀವ್ರ ಅನಾವೃಷ್ಟಿಗೆ ತುತ್ತಾಗಿದೆ. ರಾಜ್ಯ 2013 ರಿಂದ 2018ರವರೆಗೆ ಸತತ ಆರು ವರ್ಷಗಳ ಕಾಲ ತೀವ್ರ ಬರಗಾಲ ಎದುರಿಸಿತ್ತು. ಇದೀಗ ಮೂರು ವರ್ಷದ ಬಳಿಕ ಮತ್ತೆ ಬರಗಾಲಕ್ಕೆ ತುತ್ತಾಗಿದೆ. ಆಗಿನ‌ ಬರದ ವೇಳೆಯೂ ಅಪಾರ ನಷ್ಟದ ಮುಂದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬರ ಪರಿಹಾರ ಅತ್ಯಲ್ಪವಾಗಿದೆ.

2015-16ರಲ್ಲಿ ಕರ್ನಾಟಕದಲ್ಲಿ ಉಂಟಾಗಿದ್ದ ಬರದಿಂದ ಸುಮಾರು 14,471 ಕೋಟಿ ರೂ‌. ನಷ್ಟ ಅನುಭವಿಸಿತ್ತು. ಆದರೆ ಕೇಂದ್ರ ಸರ್ಕಾರ ಬರ ಪರಿಹಾರವಾಗಿ ಬಿಡುಗಡೆ ಮಾಡಿದ್ದು ಸುಮಾರು 1,540 ಕೋಟಿ ರೂ. 2016-17ರಲ್ಲಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಆವಾಗ ರಾಜ್ಯ ಸರ್ಕಾರ ಕೇಂದ್ರದಿಂದ 4,702 ಕೋಟಿ ರೂ.‌ ಪರಿಹಾರ ಕೋರಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 1,782 ಕೋಟಿ ರೂ. ಬರ ಪರಿಹಾರವನ್ನು ನೀಡಿತ್ತು.

2018-19ರಲ್ಲಿ ರಾಜ್ಯ ಸರ್ಕಾರ ನೆರೆ ಮತ್ತು ಬರಕ್ಕೆ ತುತ್ತಾಗಿತ್ತು.‌ ರಾಜ್ಯ ಸರ್ಕಾರ ಅಂದು ಸುಮಾರು 16,662 ಕೋಟಿ ರೂ.‌ ಒಟ್ಟು ನಷ್ಟ ಅನುಭವಿಸಿತ್ತು. 2018ರಲ್ಲಿ 154 ತಾಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಕೇಂದ್ರದಿಂದ ಸುಮಾರು 2,434 ಕೋಟಿ ರೂ. ಪರಿಹಾರ ಕೋರಿತ್ತು. ಈ ಪೈಕಿ ಕೇಂದ್ರ ಸರ್ಕಾರ 949.49 ಕೋಟಿ ರೂ. ಪರಿಹಾರಕ್ಕೆ ಮುಂಜೂರಾತಿ ನೀಡಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ :ಬರ ಪರಿಹಾರ: 324 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

ABOUT THE AUTHOR

...view details