ಬೆಂಗಳೂರು: ಕೆಂಪು ಗುಲಾಬಿ ಈರುಳ್ಳಿ ರಫ್ತು ಸಂಪೂರ್ಣ ನಿಷೇಧವನ್ನು ಸಡಿಲಗೊಳಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ್ ನಾರಾಯಣ ಧನ್ಯವಾದ ಹೇಳಿದ್ದಾರೆ.
ಈರುಳ್ಳಿ ಬೆಲೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ಸಂಪೂರ್ಣ ನಿಷೇಧಿಸಿದ್ದರಿಂದ ರಾಜ್ಯದ ಕೆಂಪು ಗುಲಾಬಿ ಈರುಳ್ಳಿ ಬೆಳೆಗಾರರು ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಕೆಂಪು ಈರುಳ್ಳಿ ನಿಷೇಧ ತೆರುವುಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಗೆ ಕೇಂದ್ರ ಸ್ಪಂದಿಸಿ ನವೆಂಬರ್ 30ರವರೆಗೆ 9 ಸಾವಿರ ಟನ್‌ವರೆಗೆ ರಫ್ತಿಗೆ ಅವಕಾಶ ನೀಡಿದೆ. ಇದರಿಂದ ರಾಜ್ಯದ ಈರುಳ್ಳಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಂಪು ಗುಲಾಬಿ ಈರುಳ್ಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ರಫ್ತು ನಂಬಿಯೇ ರಾಜ್ಯದ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ಆದ್ದರಿಂದ ರಫ್ತಿಗೆ ಯಾವುದೇ ನಿರ್ಬಂಧ ವಿಧಿಸದೇ ರೈತರ ನೆರವಿಗೆ ಧಾವಿಸಬೇಕು ಎಂದು ಉಪಮುಖ್ಯಮಂತ್ರಿಗಳು ಇದೇ ವೇಳೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.