ಬೆಂಗಳೂರು:2022-23ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರಾಜ್ಯದ ರೈತರಿಂದ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ವಿಧಾನಸಭೆಯ ಸದಸ್ಯರಾದ ಮಹದೇವ.ಕೆ ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಮಾತನಾಡಿದ ಸಚಿವರು, "ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುತ್ತಿದೆ. ಇದುವರೆಗೆ 4.85 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಮಾರಾಟ ಮಾಡಲು 3,24,476 ರೈತರು ನೋಂದಣಿ ಮಾಡಿಕೊಂಡಿರುತ್ತಾರೆ" ಎಂದು ತಿಳಿಸಿದರು.
5 ಲಕ್ಷ ಮೆಟ್ರಿಕ್ ಟನ್ ರಾಗಿ ವಿತರಣೆ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿರುವ ಸಂಪೂರ್ಣ ರಾಗಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ರಾಜ್ಯದಲ್ಲಿನ ಪಡಿತರ ಫಲಾನುಭವಿಗಳಿಗೆ ಕಡ್ಡಾಯವಿರುತ್ತದೆ. ರಾಗಿ ಪ್ರಮುಖ ಆಹಾರವಾಗಿದ್ದು, ಜಿಲ್ಲೆಗಳ ಪಡಿತರ ಫಲಾನುಭವಿಗಳಿಗೆ 10 ತಿಂಗಳ ಅವಧಿಯಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ವಿತರಿಸಲಾಗುತ್ತದೆ ಎಂದರು.
2021-22ನೇ ಮುಂಗಾರು ಋತುವಿನಲ್ಲಿ, ಕನಿಷ್ಠ ಬೆಂಬಲ ಯೋಜನೆಯಡಿ ರಾಜ್ಯದ 2,67,076 ರೈತರಿಂದ ಒಟ್ಟು 404783.700 ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲಾಗಿದೆ. ಸದರಿ ರಾಗಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು. ರಾಜ್ಯದಲ್ಲಿ 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ರೈತರಿಂದ ಎಂಎಸ್ಪಿ ದರದಲ್ಲಿ ರಾಗಿ ಖರೀದಿಸುವ ಮೂಲಕ ರಾಗಿ ಖರೀದಿ ನಿಗದಿತ ಗುರಿ ತಲುಪಲು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಶಾಸಕ ಕೆ.ಮಹದೇವ ಅವರು ಗಮನ ಸೆಳೆದರು.