ಬೆಂಗಳೂರು: ಮೋದಿ ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ. ರಾಜ್ಯದ ನೆರೆ ಸಂತ್ರಸ್ತ ಭಾಗದ ಜನತೆಯ ನೋವನ್ನ ಕೇಂದ್ರ ಆಲಿಸುತ್ತಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಮಲತಾಯಿ ಧೋರಣೆ ಬಿಡಿ. ರಾಜ್ಯಕ್ಕೆ ನೆರವು ನೀಡಿ. ಬಿಜೆಪಿ ಸಂಸದರು, ಸಚಿವರು ಬಾಯಿಗೆ ಬಂದಂತೆ ಮಾತಾಡೋದನ್ನ ಬಿಡಿ. ನಮ್ಮ ಜನರ ಬಳಿ ಗೌರವದಿಂದ ಮಾತಾಡಿ. ಕೇಂದ್ರದ ಧೋರಣೆ ಖಂಡಿಸಿ 2-3 ದಿನದಲ್ಲಿ ಹೋರಾಟ ಮಾಡ್ತೇವೆ ಎಂದರು.
25 ಬಿಜೆಪಿ ಸಂಸದರು ರಾಜ್ಯದಲ್ಲಿದ್ದಾರೆ. ಇಷ್ಟು ಸಂಸದರಿದ್ದರೂ ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ನೆರವು ಬಂದಿಲ್ಲ. ಬೊಬ್ಬೆ ಹೊಡೆಯೋದು ಯಾಕೆ ಅಂತ ಹೇಳ್ತಾರೆ. ಇವತ್ತು ಬೊಬ್ಬೆ ಹೊಡೆಯುವ ಪರಿಸ್ಥಿತಿ ಬಂದಿದೆ. ಸಂತ್ರಸ್ತರ ವಿಚಾರದಲ್ಲಿ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಸಂಸದರು ನಾಲಾಯಕ್ ಸಂಸದರು. ಮೋದಿ ವೇವ್, ಇವಿಎಂನಿಂದ ಗೆದ್ದವರು ನೀವು. ಬ್ಯಾಲೆಟ್ ಪೇಪರ್ನಲ್ಲಿ ಗೆದ್ದು ತೋರಿಸಿ ಎಂದು ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ 25 ಸಂಸದರು ರಾಜೀನಾಮೆ ಕೊಡಿ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಬಿಹಾರ ಸಂತ್ರಸ್ತರ ಬಗ್ಗೆ ಸಾಂತ್ವನ ಹೇಳ್ತಾರೆ. ರಾಜ್ಯದ ಸಂತ್ರಸ್ತರ ಬಗ್ಗೆ ನಿಮಗೇಕಿಲ್ಲ ಕಾಳಜಿ ಎಂದು ಪ್ರಧಾನಿ ಮೋದಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಬ್ಯಾಲೆಟ್ ಪೇಪರ್ನಲ್ಲಿ ಗೆದ್ದು ಬನ್ನಿ. ರಾಜ್ಯದ ಜನರನ್ನ ವಂಚಿಸಿ ಗೆದ್ದಿದ್ದೀರಿ ನೀವು. ಇವಿಎಂ ಇರೋದ್ರಿಂದ ನಾವು ಗೆಲ್ತೇವೆ ಅಂತ ಜಂಭ. ನಾವು ಏನು ಮಾತನಾಡಿದ್ರು ಗೆಲ್ತೇವೆ ಅನ್ನೋ ಜಂಭವಿದೆ. ಅದಕ್ಕೆ ಹೇಳ್ತಿದ್ದೇವೆ, ನೀವು ಬ್ಯಾಲೆಟ್ನಲ್ಲಿ ಗೆದ್ದು ತೋರಿಸಿ ಎಂದು ರಾಜ್ಯದ ಬಿಜೆಪಿ ಸಂಸದರಿಗೆ ಬಹಿರಂಗ ಸವಾಲು ಹಾಕಿದರು.