ಬೆಂಗಳೂರು:ಚೀನಾದ ಶಿಯೋಮಿ ಟೆಕ್ನಾಲಜಿ ಕಂಪನಿಯ ₹5,551.27 ಕೋಟಿ ಮೌಲ್ಯದ ಬ್ಯಾಂಕ್ ಖಾತೆಯ ಜಪ್ತಿಗೆ ಅನುಮತಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ನಡುವೆ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೇಮಾ) ಸೆಕ್ಷನ್ 37ರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ಕ್ರಮವನ್ನು ಪ್ರಶ್ನಿಸಿ ಶಿಯೋಮಿಯೂ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಫೆಮಾ ಕಾಯಿದೆ ಸೆಕ್ಷನ್ 37ರ ಸಿಂಧುತ್ವವನ್ನು ಶಿಯೋಮಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಶಿಯೋಮಿಯು ಆಕ್ಷೇಪಾರ್ಹವಾದ ಹಣವನ್ನು ತನ್ನ ಬ್ಯಾಂಕ್ ಖಾತೆಗಳಲ್ಲಿ ಇರುವುದನ್ನು ಖಾತರಿಪಡಿಸಲು ಆದೇಶಿಸಬೇಕು ಎಂದು ಕೇಂದ್ರ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ, ಏಕ ಸದಸ್ಯ ಪೀಠ ಈ ಸಂಬಂಧ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ, 5551.27 ಕೋಟಿ ರೂ.ಗಳನ್ನು ಜಪ್ತಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ಕೋರಲಾಗಿದೆ.
ಶೇ.30ರಷ್ಟು ಬಳಕೆ ಆರೋಪ: ಶಿಯೋಮಿ ಕಂಪನಿ 2022ರ ಏಪ್ರಿಲ್ ವೇಳೆಗೆ ಶಿಯೋಮಿ ಖಾತೆಯಲ್ಲಿ ಸುಮಾರು ₹7,000 ಕೋಟಿ ಹಣವಿತ್ತು. ಅದರಲ್ಲಿ ಸುಮಾರು ಶೇಕಡ 30ರಷ್ಟು ಹಣವನ್ನು ಈಗಾಗಲೇ ಬಳಕೆ ಮಾಡಲಾಗಿದೆ. ಇದು ಸಹ ಜಪ್ತಿಯ ಭಾಗವಾಗಿತ್ತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಹಿಂದೆ ಇದ್ದ ಮೊತ್ತದಲ್ಲಿ 2022ರ ಮೇ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡುವೆ ಶಿಯೋಮಿ ಕಂಪನಿಯು ಸುಮಾರು ₹1,594.48 ಕೋಟಿ ಹಣ ಬಳಕೆ ಮಾಡಿಕೊಂಡು, ₹4,241 ಕೋಟಿಯನ್ನು ಮಾತ್ರ ಬಾಕಿ ಉಳಿಸಿದೆ. ಹಣವನ್ನು ಜಪ್ತಿ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಜೊತೆಗೆ, ಶಿಯೋಮಿ ವಿದೇಶಿ ಕಂಪನಿಯಾಗಿದ್ದು, ಭಾರತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಶಿಯೋಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.
ಪ್ರಕರಣದ ಹಿನ್ನೆಲೆ:2022ರ ಏಪ್ರಿಲ್ 29ರಂದು ಶಿಯೋಮಿ ಕಂಪನಿಗೆ ಸೇರಿದ್ದ 5551.27 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಫೆಮಾ ಕಾಯ್ದೆಯ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡಿತ್ತು. ಅಲ್ಲದೆ, ಅರ್ಜಿದಾರ ಕಂಪನಿಯು ಭಾರತದಿಂದ ಹೊರಭಾಗದಲ್ಲಿರುವ ವಿದೇಶಿ ಕಂಪನಿಯಾದ ಕ್ವಾಲ್ಕಾಮ್‌ಗೆ ರಾಯಧನದ ರೂಪದಲ್ಲಿ ಪಾವತಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಣ ವಶಪಡಿಸಿಕೊಳ್ಳುತ್ತಿರುವುದಾಗಿ ಜಾರಿ ನಿರ್ದೇಶನಾಲಯ ಕಂಪನಿಗೆ ತಿಳಿಸಿತ್ತು.