ಕರ್ನಾಟಕ

karnataka

ETV Bharat / state

ರೈತರನ್ನು ಸ್ವಾವಲಂಬಿ ಮಾಡಲು ಕೇಂದ್ರ ಸರ್ಕಾರ ಪಣ : ಸಿ ಟಿ ರವಿ - creation of anarchy in the pretext of the peasant movement

ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ಪ್ರಧಾನಿಯವರ ನಿರ್ಧಾರದ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಧ್ವನಿಯೆತ್ತಿ ಚಳವಳಿಗೆ ಬೆಂಬಲ ನೀಡಿದವು. ರೈತರ ಬೆಳೆಗೆ ಬೆಲೆ ಖಾತರಿ ಪಡಿಸುವ ಗುತ್ತಿಗೆ ಕೃಷಿ ವಿರುದ್ಧವೂ ಅಪಪ್ರಚಾರ ನಡೆಯಿತು. ರೈತ ಸ್ವಾವಲಂಬಿ ಆಗಬಾರದೆಂಬ ಪ್ರಯತ್ನ ಈ ಷಡ್ಯಂತ್ರದ ಹಿಂದಿದೆ..

ct-ravi
“ಜಗನ್ನಾಥ ಭವನ”ದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿದ ಸಿಟಿ ರವಿ

By

Published : Jun 21, 2021, 8:20 PM IST

ಬೆಂಗಳೂರು :ರೈತನನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು “ಆತ್ಮನಿರ್ಭರ ಕೃಷಿ ನೀತಿ”ಯನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಕಲ್ಯಾಣ ನೀತಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

ವಿಜ್ಞಾನ ಮತ್ತು ಕೈಗಾರಿಕೆಯ ಅಡಿಪಾಯವೂ ಕೃಷಿಯೇ ಆಗಿದೆ. ಕೃಷಿ ಇಲ್ಲದೆ ಬದುಕಿಲ್ಲ. ಸಾಫ್ಟ್​ವೇರ್​ ತಿನ್ನಲು ಅಸಾಧ್ಯ. ನೇಗಿಲನ್ನು ಮರೆತು ನಾಗರಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.

ರೈತರು ಪರಾವಲಂಬಿಯಾಗಿದ್ದಾರೆ :ಇತಿಹಾಸವನ್ನು ಗಮನಿಸಿದರೆ ಭಾರತವು ಕೃಷಿಯನ್ನು ಅವಲಂಬಿಸಿ ಶ್ರೀಮಂತ ರಾಷ್ಟ್ರವಾಗಿ ಇದ್ದದ್ದು ಕಾಣುತ್ತದೆ. ಆದರೆ, ಈಗ ಹೊಲ ಮಾರಾಟ ಮಾಡಿಯಾದರೂ ಕುಕ್, ಪಿಯೋನ್ ಕೆಲಸ ಪಡೆಯುವ ಪರಿಸ್ಥಿತಿ ಬಂದಿದೆ. ಸ್ವಾವಲಂಬಿ ರೈತನನ್ನು ಪರಾವಲಂಬಿ ಮಾಡಿದವರು ಯಾರು? ಸಾಲದಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ದುಸ್ಥಿತಿಗೆ ರೈತ ಯಾಕೆ ಬಂದ ಎಂದು ಪ್ರಶ್ನಿಸಿದ ಅವರು, ರಸಗೊಬ್ಬರ ವಿದೇಶದಿಂದ ತರುವ ಸ್ಥಿತಿ ಬಂದಿದೆ. ಬೀಜದ ವಿಚಾರದಲ್ಲೂ ಪರಾವಲಂಬಿತನ ಬಂದಿದೆ. ದೇಶ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಗಿದೆ. ಆದರೆ, ರೈತರು ಪರಾವಲಂಬಿಯಾಗಿದ್ದಾರೆ ಎಂದು ವಿವರಿಸಿದರು.

ಎಂಆರ್​ಪಿ ನಿಗದಿ ಮಾಡುವ ಪರಿಸ್ಥಿತಿ ಇಲ್ಲ :ಮಿತ್ರನನ್ನು ಶತ್ರುವಾಗಿ ಬಿಂಬಿಸುವ ಟೂಲ್‍ಕಿಟ್ ಪಕ್ಷದವರು ನಮ್ಮ ದೇಶದಲ್ಲಿದ್ದಾರೆ. ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕೃಷಿಕನನ್ನು ಸಂಕಷ್ಟದಿಂದ ಪಾರು ಮಾಡಲು ಕೆಲವು ಐತಿಹಾಸಿಕ ನಿರ್ಧಾರ ಮಾಡಿದೆ. ಬೇಡಿಯನ್ನೇ ಆಭರಣ ಎಂದು ಭಾವಿಸುವ ದುಸ್ಥಿತಿ ಬಂದಿದೆ. ಬ್ಲೇಡ್ ತಯಾರಿಸುವವನು ತನ್ನ ಉತ್ಪನ್ನದ ಗರಿಷ್ಠ ಮಾರಾಟ ದರ (ಎಂಆರ್ಪಿ​​) ನಿರ್ಧರಿಸುತ್ತಾನೆ. ಆದರೆ, ಹೆಂಡತಿ ಮಕ್ಕಳೊಂದಿಗೆ ದುಡಿದ ರೈತರು ಯಾವ ಬೆಳೆಗೂ ಎಂಆರ್​ಪಿ ನಿಗದಿ ಮಾಡುವ ಪರಿಸ್ಥಿತಿ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅನುಮಾನದ ಬೀಜ ಬಿತ್ತುವ ಯತ್ನ : ಪ್ರಧಾನಿ ನರೇಂದ್ರ ಮೋದಿ ಅವರು ರೈತ ಎಲ್ಲಿಯಾದರೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ಕೊಟ್ಟಿರುವುದು ಬಿಡುಗಡೆಯೇ ಅಥವಾ ಬೇಡಿಯೇ ಎಂದು ಪ್ರಶ್ನಿಸಿ ರೈತಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಡುವೆ ಕೃಷಿ ಸುಧಾರಣಾ ಮಸೂದೆ ಬಗ್ಗೆ ಜನಮಾನಸದಲ್ಲಿ ಅನುಮಾನದ ಬೀಜ ಬಿತ್ತುವ ಯತ್ನ ನಡೆದಿದೆ ಎಂದು ಅವರು ಟೀಕಿಸಿದರು.

ಅರಾಜಕತೆ ಸೃಷ್ಟಿಸುವ ಯತ್ನ :ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ಪ್ರಧಾನಿಯವರ ನಿರ್ಧಾರದ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಧ್ವನಿಯೆತ್ತಿ ಚಳವಳಿಗೆ ಬೆಂಬಲ ನೀಡಿದವು. ರೈತರ ಬೆಳೆಗೆ ಬೆಲೆ ಖಾತರಿ ಪಡಿಸುವ ಗುತ್ತಿಗೆ ಕೃಷಿ ವಿರುದ್ಧವೂ ಅಪಪ್ರಚಾರ ನಡೆಯಿತು. ರೈತ ಸ್ವಾವಲಂಬಿ ಆಗಬಾರದೆಂಬ ಪ್ರಯತ್ನ ಈ ಷಡ್ಯಂತ್ರದ ಹಿಂದಿದೆ. ಮೂರ್ನಾಲ್ಕು ಮಾರುಕಟ್ಟೆಗಳು ಇದ್ದರೆ ರೈತರಿಗೆ ಆಯ್ಕೆ ಇರುತ್ತದೆ. ಇದು ರೈತ ವಿರೋಧಿಯೇ? ಪ್ರಧಾನಿಯವರನ್ನು ಸನ್ಮಾನಿಸಬೇಕಾದವರು ಮಸೂದೆ ಹಿಂದೆಗೆತಕ್ಕೆ ಒತ್ತಾಯಿಸಲಾಯಿತು. ರೈತ ಚಳವಳಿ ನೆಪದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ನಡೆಯಿತು ಎಂದು ಕಿಡಿಕಾರಿದರು.

ಓದಿ:ನಮ್ಮಲ್ಲಿ ಗುಂಪುಗಾರಿಕೆ ಇಲ್ಲ, ಇರೋದು ಕಾಂಗ್ರೆಸ್​ ಗುಂಪು ಅಷ್ಟೇ: ಡಿಕೆ ಶಿವಕುಮಾರ್

ABOUT THE AUTHOR

...view details