ಬೆಂಗಳೂರು: ನೆರೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಅವರ ನಿವಾಸ ಕಾವೇರಿಯಲ್ಲಿ ಇಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಷ್ಟೇ ಬಂದು ಹೋಗಿದ್ದಾರೆ. ಆದರೆ, ಪರಿಹಾರ ಇನ್ನೂ ಬಂದಿಲ್ಲ ಎಂದರು. ಬೇರೆ ರಾಜ್ಯಗಳಂತೆ ನಮ್ಮನ್ನು ಕಾಣಲಿ. ಆದರೆ, ನಮ್ಮ ರಾಜ್ಯಕ್ಕೆ ಪರಿಹಾರ ಕೊಡುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುವುದು ಬೇಡ ಎಂದು ಹೇಳಿದರು.
ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ಆಗಿಲ್ಲ. ನಮ್ಮ ಗಮನಕ್ಕೆ ಬಂದಿಲ್ಲ. ಇದು ಗೃಹ ಸಚಿವರ ವ್ಯಾಪ್ತಿಗೆ ಬರವುದೂ ಇಲ್ಲ. ಅನುಮಾನಗಳೇನಾದರೂ ಇದ್ದರೆ ತನಿಖೆ ನಡೆಸಬಹುದು ಎಂದರು. ಭಯೋತ್ಪಾದಕರು ಮತ್ತು ಕ್ರಿಮಿನಲ್ ಗಳ ಫೋನ್ ಟ್ಯಾಪಿಂಗ್ ಮಾಡುತ್ತಾರೆ. ಅದು ಗೃಹ ಇಲಾಖೆ ಅನುಮತಿ ಪಡೆದು ಟ್ಯಾಪಿಂಗ್ ಮಾಡುತ್ತಾರೆ. ಇದು ನನಗೆ ಗೊತ್ತಿರುವ ವಿಚಾರ. ಇದು ಹೊರತುಪಡಿಸಿ ಅವರು ಆರೋಪ ಮಾಡುತ್ತಿದ್ದಾರೆ. ಬೇಕಿದ್ರೆ ತನಿಖೆ ನಡೆಸಲಿ ಎಂದು ಹೇಳಿದ್ದಾರೆ.
ಈ ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಕಡಿತ ಮಾಡಿದರೆ ಸುಮ್ಮನೆ ಇರಲ್ಲ. ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳು ಎಲ್ಲರಿಗೂ ಅನುಕೂಲವಾಗಿವೆ. ಅವರು ಸಿಎಂ ಆಗಿದ್ದಾಗ ಇಂತಹ ಸಂದರ್ಭಗಳು ಬಂದಾಗ ಯಶಸ್ವಿಯಾಗಿ ಹಣ ಹೊಂದಾಣಿಕೆ ಮಾಡಿದ್ದಾರೆ. ಈಗಲೂ ಸಿಎಂ ಅದನ್ನು ಮಾಡಬೇಕು. ನೆರೆ, ಬರ ಅಂತಾ ನೆಪ ಹೇಳಿ ಯೋಜನೆ ಕಡಿತ ಮಾಡುವುದು ಬೇಡ. ಕಡಿತ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.