ಬೆಂಗಳೂರು:ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಸಿಬಿಐ, ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮಣ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಪ್ರತಿಪಕ್ಷಗಳ ಪ್ರಬಲ ನಾಯಕರನ್ನು ನಿಯಂತ್ರಿಸಲು ಬಿಜೆಪಿ ಆರ್ಎಸ್ಎಸ್ ನಾಯಕರನ್ನು ಕಳುಹಿಸಿ, ಸಂದಾನ ಮಾಡಿಸಿ ಪಕ್ಷ ಸೇರುವಂತೆ ಆಹ್ವಾನಿಸುತ್ತಾರೆ, ಅದಕ್ಕೆ ಒಪ್ಪದಿದ್ದರೆ ಈ ಸಂಸ್ಥೆಗಳ ಮೂಲಕ ದಾಳಿ ಮಾಡಿಸಲಾಗುವುದು ಎಂದು ಹೇಳುತ್ತಾರೆ. ಇತ್ತೀಚಿಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 25 ದಿನಗಳ ಅವಧಿಯಲ್ಲಿ 107 ದಾಳಿಗಳು ನಡೆದಿವೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಮೇಲೆ 17 ಬಾರಿ ಐಟಿ ಮತ್ತು ಇಡಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಇತ್ತೀಚೆಗೆ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿರುವುದು ಟಿ.ಜೆ ಅಬ್ರಾಹಂ ಎಂಬುವವರು ಮೂರುವರೆ ವರ್ಷಗಳ ಹಿಂದೆ ಲೋಕಾಯುಕ್ತಕ್ಕೆ ನೀಡಿದ್ದ ದೂರನ್ನು ಯಡಿಯೂರಪ್ಪನವರ ಮೂಲಕ ಸಿಬಿಐಗೆ ತನಿಖೆಗಾಗಿ ವರ್ಗಾವಣೆ ಮಾಡಿಸಿದ್ದರು. ಈಗ ಇದ್ದಕ್ಕಿದ್ದಂತೆ ಮತ್ತೆ ಆರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರ ಮೇಲೆ ನಿರಂತರವಾಗಿ ದಾಳಿ ನಡೆಯಲಿದೆ. ಇಡಿ, ಐಟಿ, ಸಿಬಿಐ ಹಾಗೂ ಎನ್ಐಎ ಕಾರ್ಯವ್ಯಾಪ್ತಿಯೇ ಬೇರೆ. ಆದರೂ ಒಂದೇ ಪ್ರಕರಣದಲ್ಲಿ ಈ ಮೂರು ಸಂಸ್ಥೆಗಳು ಪದೇ ಪದೆ ದಾಳಿ ಮಾಡುತ್ತಲೇ ಇವೆ. ಈ ಅಧಿಕಾರಿಗಳು ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡುವುದಿಲ್ಲ. ಬಹಳ ಪ್ರಮುಖ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ.
ಬಿಜೆಪಿಯ ಕುತಂತ್ರದ ಬಗ್ಗೆ ಅವರೇ ನೀಡಿರುವ ಮಾಹಿತಿ ಪ್ರಕಾರ 2014 ರಿಂದ 2022ರ ಅವಧಿಯಲ್ಲಿ ಒಟ್ಟು 124 ರಾಜಕೀಯ ನಾಯಕರು ಸಿಬಿಐ ದಾಳಿ, ತನಿಖೆಗೆ ಒಳಗಾಗಿದ್ದಾರೆ. ಇದರಲ್ಲಿ 118 ನಾಯಕರು ವಿರೋಧ ಪಕ್ಷದ ನಾಯಕರು. ಇಬ್ಬರು ಬಿಜೆಪಿಯೇತರ, ಇಬ್ಬರು ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮೇಲೆ ದಾಳಿ ನಡೆದಿಲ್ಲ ಎಂದು ಹೇಳಿದರು. ಇಲ್ಲಿ ದಾಳಿಯ ಶೇಕಡಾವಾರು ಪ್ರಮಾಣ ನೋಡುವುದಾದರೆ, 96%ರಷ್ಟು ವಿರೋಧ ಪಕ್ಷದವರಾಗಿದ್ದಾರೆ.
ಇನ್ನು ಇಡಿ ದಾಳಿ ಪ್ರಕಾರ ಇದುವರೆಗೂ ಈ ಸಂಸ್ಥೆಯಲ್ಲಿ 5400 ಪ್ರಕರಣ ದಾಖಲಾಗಿದ್ದು, ಇದುವರೆಗೂ ಅಪರಾಧಿಗಳು ಎಂದು ಘೋಷಣೆ ಮಾಡಿರುವವರು ಕೇವಲ 23. ಆ ಮೂಲಕ ಶೇ 0.3ಗಿಂತ ಕಡಿಮೆ ಪ್ರಮಾಣದಲ್ಲಿ ಅಪರಾಧಿಗಳ ಘೋಷಣೆಯಾಗಿದೆ. ಇಡಿಯನ್ನು ಯಾವ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದೀರಿ. ಉಳಿದ ಪ್ರಕರಣಗಳನ್ನು ಬ್ಲಾಕ್ಮೇಲೆ ಮಾಡಲು ಉಳಿಸಿಕೊಂಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲೇ ಬೇಕು ಎಂದು ಪಣತೊಟ್ಟಿದ್ದಾರೆ. ಆದರೆ ಜನ ಇವರನ್ನು ಕಿತ್ತಾಕಿ ಕಾಂಗ್ರೆಸ್ ಸರ್ಕಾರ ತರಲು ನಿರ್ಧಾರ ಮಾಡಿದ್ದಾರೆ. ಇವರ ಪ್ರಯತ್ನ ನಡೆಯುವುದಿಲ್ಲ, ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಹೆಚ್.ವಿಶ್ವನಾಥ್ ವಿರುದ್ಧ ನೇರ ಆರೋಪ ಮಾಡಿ ಚುನಾವಣೆ ಸಮಯದಲ್ಲಿ ನಿಮಗೆ 15 ಕೋಟಿ ನೀಡಲಾಗಿತ್ತು. ಅದರಲ್ಲಿ ಕೇವಲ 4-5 ಕೋಟಿ ಖರ್ಚು ಮಾಡಿದ್ದೀರಿ ಎಂದು ಹೇಳಿದ್ದಾರೆ.
17 ಬಂಡಾಯ ಶಾಸಕರಿಗೆ ತಲಾ 15 ಕೋಟಿ ಎಂದು ಲೆಕ್ಕ ಹಾಕಿದರೂ 350 ಕೋಟಿ ಹಣವನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಐಟಿ, ಇಡಿ ಸುಮೋಟೋ ಪ್ರಕರಣ ಯಾಕೆ ದಾಖಲಿಸಿಲ್ಲ? ಈ ಸಂಸ್ಥೆಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿವೆ, ಕೆಲ ದಿನಗಳ ಹಿಂದೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಯಾಕೆ ಸುಮೋಟೋ ಪ್ರಕರಣ ದಾಖಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು.