ಕರ್ನಾಟಕ

karnataka

ETV Bharat / state

ಉದ್ಯೋಗ ಸೃಷ್ಟಿಗೆ ನಾವು ಸ್ಥಾಪಿಸಿದ್ಧ ಸಂಸ್ಥೆಗಳನ್ನೇ ಕೇಂದ್ರ ಸರ್ಕಾರ ಮಾರಾಟ ಮಾಡ್ತಿದೆ: ಡಿಕೆಶಿ

ನಮ್ಮದು ಇತಿಹಾಸವುಳ್ಳ, ರಾಷ್ಟ್ರಧ್ವಜವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಕಳೆದ 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿ, ಸಾಕಷ್ಟು ಬದಲಾವಣೆ ತಂದಿದ್ದೇವೆ. ನೆಹರೂ ಅವರ ಕಾಲದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಆರಂಭಿಸಲಾಯಿತು. ಇದೀಗ ಅವುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಡಿ ಕೆ ಶಿವಕುಮಾರ್​​ ಬೇಸರ ವ್ಯಕ್ತಪಡಿಸಿದರು.

Youth Voice Program of State Youth Congress
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

By

Published : Jul 11, 2022, 6:15 PM IST

Updated : Jul 11, 2022, 6:39 PM IST

ಬೆಂಗಳೂರು:ನಿರುದ್ಯೋಗಿ ಯುವಕರನ್ನು ಹುಡುಕಿ, ಅವರಿಗಾಗಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ರಾಜ್ಯ ಯುವ ಕಾಂಗ್ರೆಸ್​ನ ಯುವ ಧ್ವನಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಸಲಹೆಗಳನ್ನು ನೀಡಿ: ಬಳಿಕ ಮಾತನಾಡಿದ ಅವರು, ನಾನು, ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರೆಲ್ಲರೂ ಹಳಬರಾಗಿದ್ದೇವೆ. ಈಗಿನ ಯುವಕರು ಬಹಳ ಬುದ್ಧಿವಂತರಾಗಿದ್ದು, ಯುವಕರ ಧ್ವನಿ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ನೀವೆಲ್ಲರೂ ನಿಮ್ಮ ಸಲಹೆಗಳನ್ನು ನಮಗೆ ನೀಡಬೇಕು. ಪ್ರದೇಶವಾರು ಹಾಗೂ ತಾಲೂಕುವಾರು ಉದ್ಯೋಗ ನೀತಿ ರೂಪಿಸಬೇಕು ಎಂಬ ಸಲಹೆಯನ್ನು ಒಪ್ಪುತ್ತೇನೆ. ಮತ್ತೊಬ್ಬರು ಪಂಚಾಯ್ತಿ ಮಟ್ಟದಲ್ಲಿ ಉದ್ಯೋಗ ಮೇಳ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ, ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂದರು.

ಸಾರ್ವಜನಿಕ ವಲಯದ ಉದ್ದಿಮೆಗಳ ಆರಂಭ: ನಾವಿಲ್ಲಿಗೆ ಚುನಾವಣಾ ಪ್ರಚಾರ, ಭಾಷಣ ಮಾಡಲು ಬಂದಿಲ್ಲ. ನಮಗೆ ಜೀವನದಲ್ಲಿ ಗುರಿ ಇದ್ದು, ನಾವದನ್ನು ತಲುಪಬೇಕು. ನಮ್ಮದು ಇತಿಹಾಸವುಳ್ಳ, ರಾಷ್ಟ್ರಧ್ವಜವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಕಳೆದ 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿ, ಸಾಕಷ್ಟು ಬದಲಾವಣೆ ತಂದಿದ್ದೇವೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನೆಹರೂ ಅವರ ಕಾಲದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಆರಂಭಿಸಲಾಯಿತು. ಉದ್ಯೋಗ ಸೃಷ್ಟಿ ಹಾಗೂ ದೇಶ ಸ್ವಾವಲಂಬನೆ ಸಾಧಿಸಲು ಹೆಚ್ಎಂಟಿ, ಐಟಿಐ, ಬೆಮೆಲ್, ಇಸ್ರೋ, ಬಿಹೆಚ್ಇಎಲ್ ಸೇರಿದಂತೆ ಹಲವು ಉದ್ದಿಮೆಗಳನ್ನು ಆರಂಭಿಸಲಾಯಿತು. ಈಗ ಅವುಗಳನ್ನೆಲ್ಲ ಮಾರಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಟೀಕಿಸಲು ಬಂದಿಲ್ಲ: ಈಗ ಜಾಗತೀಕರಣ ಹಾಗೂ ಖಾಸಗೀಕರಣದತ್ತ ಸಮಾಜ ಸಾಗುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದ್ದಂತೆ ಉದ್ಯೋಗಗಳ ಅಗತ್ಯತೆಯೂ ಹೆಚ್ಚಿದೆ. ದೇಶದಲ್ಲಿ 18 ವರ್ಷದಿಂದ 40 ವರ್ಷದ ವಯೋಮಾನದವರು ಶೇ.47 ರಷ್ಟು ಜನ ಇದ್ದಾರೆ. ನಿರುದ್ಯೋಗದ ಬಗ್ಗೆ ಮಾತನಾಡಿ ಬಿಜೆಪಿ ಟೀಕಿಸಲು ನಾವಿಲ್ಲಿ ಸೇರಿಲ್ಲ. ಕಾಂಗ್ರೆಸ್ ಪಕ್ಷದ ಮುಂದಿನ ಚಿಂತನೆ ಹೇಗಿರಬೇಕು? ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ? ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಯಾರು? ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ? ಎಂಬುದನ್ನು ತಿಳಿಯಬೇಕು.

ಮುಂದೆ ನಾವು ಚುನಾವಣೆಗೆ ಹೋಗುವಾಗ ಯುವಕರಿಗೆ ಯಾವ ಭರವಸೆ ನೀಡಬೇಕು? ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕು? ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆಯನ್ನು ತಿಳಿಸಿದ್ದರು. ಅದೇ ರೀತಿ ಬೇರೆ ಉತ್ತಮ ಯೋಜನೆ ನೀಡಬಹುದೇ? ಎಂದು ಆಲೋಚನೆ ಮಾಡಲು ನಿಮ್ಮನ್ನೆಲ್ಲ ಇಲ್ಲಿಗೆ ಕರೆದಿದ್ದೇವೆ ಎಂದು ವಿವರಿಸಿದ್ದರು.

ಸಮೀಕ್ಷೆ ಮಾಡಲು ಆ್ಯಪ್​​ ಸಿದ್ಧ: ಈ ವಿಚಾರವಾಗಿ ನೀವು ಸಮೀಕ್ಷೆ ಮಾಡಬೇಕು. ಪಕ್ಷ ನಿಮಗೆ ಅಗತ್ಯ ನೆರವು ನೀಡಲಿದೆ. ನೀವು ಮನೆ ಮನೆಗೂ ಹೋಗಿ ಆಫ್ ಲೈನ್ ಆದರೂ ಮಾಡಬಹುದು, ಆನ್ ಲೈನ್ ಆಗಿಯಾದರೂ ಸಮೀಕ್ಷೆ ಮಾಡಬಹುದು. ಆನ್ ಲೈನ್​ನಲ್ಲಿ ಸಮೀಕ್ಷೆ ಮಾಡಲು ಆ್ಯಪ್​​ ಕೂಡ ಸಿದ್ಧಪಡಿಸಲಾಗಿದೆ. ಆ ಮೂಲಕ ಯುವಕರು ಏನನ್ನು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಈ ರೀತಿ ಮಾಡುವಾಗ ಪಕ್ಷಕ್ಕೆ ಯಾರೂ ಸ್ಪಂದಿಸುತ್ತಾರೆ, ಯಾರು ಸ್ಪಂದಿಸುವುದಿಲ್ಲ ಎಂದು ತಿಳಿಯುತ್ತದೆ.

ಇದೇ ಸಂದರ್ಭದಲ್ಲಿ ಡಿಜಿಟಲ್ ಯೂಥ್ ನೇಮಕ ಮಾಡಲು, ಬೂತ್ ಮಟ್ಟದ ಸಮತಿ ಮಾಡಲು ಅವಕಾಶ ಸಿಗುತ್ತದೆ. ಈ ದೇಶಕ್ಕೆ ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಹೈಜಾಕ್ ಮಾಡಲು ಹೊರಟಿದ್ದಾರೆ. ಅವರು ಮನೆ, ಮನೆಯಲ್ಲೂ ತಿರಂಗಾ ಹಾರಿಸುತ್ತಾರಂತೆ, ಸಂತೋಷ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆದರೂ ಸ್ವಾತಂತ್ರ್ಯ ನಮ್ಮದು ಎನ್ನುತ್ತಿದ್ದಾರೆ.

ಪಾದಯಾತ್ರೆ ಮಾಡಲು ತೀರ್ಮಾನ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಮಗೆ ಒಂದು ಕಾರ್ಯಕ್ರಮ ಕೊಟ್ಟಿದ್ದಾರೆ. ದೇಶದ 75ನೇ ಸ್ವಾತಂತ್ರ್ಯ ದಿನಾಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಿದೆ. ಇದರ ಜತೆಗೆ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಕನಿಷ್ಠ 1 ಲಕ್ಷ ಮಂದಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಬೇಕು. ಆ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಬೇಕು.

ರಾಜ್ಯ ಯುವ ಕಾಂಗ್ರೆಸ್​ನ ಯುವ ಧ್ವನಿ ಕಾರ್ಯಕ್ರಮ

70-80 ಕ್ಷೇತ್ರಗಳ ಪ್ರವಾಸ:ದೂರದ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಿಂದ 500 -1000 ಜನ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಪ್ರತಿ ಕ್ಷೇತ್ರದಿಂದ ಕನಿಷ್ಠ 3 ಸಾವಿರ ಜನ ಭಾಗವಹಿಸಬೇಕು. ಈ ಪಾದಯಾತ್ರೆಯಲ್ಲಿ ಎಲ್ಲ ವರ್ಗದವರು ಕೂಡ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಈ ಕಾರ್ಯಕ್ರಮಕ್ಕಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಾನು 70-80 ಕ್ಷೇತ್ರಗಳ ಪ್ರವಾಸ ಮಾಡುತ್ತೇನೆ. ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಇತರೆ ನಾಯಕರು ಕೂಡ ಪ್ರವಾಸ ಮಾಡುವಂತೆ ಮನವಿ ಮಾಡುತ್ತೇನೆ.

ಈ ಕಾರ್ಯಕ್ರಮವನ್ನು ಬಸವನಗುಡಿ ಮೈದಾನದಲ್ಲಿ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಇದು ಪಕ್ಷದ ಕಾರ್ಯಕ್ರಮ ಅಲ್ಲ. ದೇಶದ ಕಾರ್ಯಕ್ರಮ. ಇದಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇವೆ. ನೀವು ಬದಲಾವಣೆ, ಅಭಿವೃದ್ಧಿ ಹಾಗೂ ವಿಜಯದ ಭಾಗವಾಗಬೇಕು. ಅದಕ್ಕೆ ತಯಾರಿ ನಡೆಯಬೇಕು ಎಂದರು.

ಇದನ್ನೂ ಓದಿ:ಎಷ್ಟು ಬೇಗ ಮೋದಿ ಸರ್ಕಾರ ತೊಲಗುತ್ತದೋ, ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತದೆ: ಸಿದ್ದರಾಮಯ್ಯ

ಬಿಜೆಪಿಯವರ ಅಪರಾಧಗಳು ಬಹಳಷ್ಟಿದ್ದು, ಅವುಗಳೇ ನಮಗೆ ಅಸ್ತ್ರವಾಗಿವೆ. ಪಿಎಸ್ ಐ ನೇಮಕಾತಿ ಹಾಗೂ ಇತರ ನೇಮಕಾತಿ ಅಕ್ರಮಗಳು ನಡೆದಿವೆ. ನೇಮಕಾತಿ ಪರೀಕ್ಷೆ ಉತ್ತರ ಪತ್ರಿಕೆಯನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವ ಇತಿಹಾಸ ಇದೆಯೇ? ಶಿಕ್ಷಣ ಸಚಿವ ಪಡೆದಿರುವ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿ ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಯನ್ನು ಶರಣಾಗಿಸಿದ್ದಾರೆ. ಪ್ರಕರಣದಲ್ಲಿ ದೊಡ್ಡವರೆಲ್ಲ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯನವರೂ ಹೇಳಿದ್ದಾರೆ ಎಂದು ಡಿಕೆಶಿ ಬಿಜೆಪಿ ವಿರುದ್ಧ ಅಬ್ಬರಿಸಿದರು.

Last Updated : Jul 11, 2022, 6:39 PM IST

For All Latest Updates

TAGGED:

ABOUT THE AUTHOR

...view details