ಬೆಂಗಳೂರು: ಹಲವು ಕ್ಷೇತ್ರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದ್ದು, ಹೂಡಿಕೆಗೆ ಪೂರಕವಾಗ ರಾಜ್ಯವಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಗರದ ಅರಮನೆ ಆವರಣದಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್, ಉಕ್ರೇನ್ ಯುದ್ದದ ಸಮಯದಲ್ಲಿ ಪ್ರಧಾನಿ ಮೋದಿ ದೇಶದ ಆರ್ಥಿಕತೆಯನ್ನು ಸೂಕ್ಷ್ಮವಾಗಿ ಮುನ್ನಡೆಸಿದ್ದಾರೆ. ಎಂಎಸ್ಎಂಇ ಮತ್ತು ಎಸ್ಇಜೆಡ್ ವಲಯಗಳಲ್ಲಿ ಪೂರಕವಾಗುವಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ. ಭಾರತದ ಬಗ್ಗೆ ವಿದೇಶದಲ್ಲಿ ಉತ್ತಮ ಅಭಿಪ್ರಾಯವಿದೆ. ಭಾರತ ಆರ್ಥಿಕ ಸಾಮರ್ಥ್ಯ, ಸಫಲತೆಯನ್ನು ಕಂಡಿದೆ ಎಂಬ ಅಭಿಪ್ರಾಯ ವಿದೇಶದಲ್ಲಿದೆ. ಕರ್ನಾಟಕ ಕೂಡ ಭಾರತದ ನೀತಿ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಸಾಧಿಸಿದೆ ಎಂದರು.
ಇದನ್ನೂ ಓದಿ:Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ
ಐದು ಲಕ್ಷ ಕೋಟಿ ಗುರಿ ಇರಿಸಿಕೊಂಡು ಹೂಡಿಕೆದಾರರ ಸಮಾವೇಶಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಇಂದೇ 2.8 ಲಕ್ಷ ಕೋಟಿ ಹೂಡಿಕೆಗೆ ಒಡಂಬಡಿಕೆ ಆಗಿದೆ. ಮೊದಲ ದಿನದ ಸಮಾವೇಶದಲ್ಲೇ ಶೇ.50ಕ್ಕಿಂತ ಹೆಚ್ಚು ಒಡಂಬಡಿಕೆ ಕ್ಲಿಯರೆನ್ಸ್ ಪಡೆದುಕೊಂಡಿದೆ ಗ್ರೀನ್ ಅಮೋನಿಯಾ, ಇಂಡಸ್ಟ್ರಿಯಲ್ ಕಾರಿಡಾರ್, ಬಂದರು ನಿರ್ಮಾಣ ಕ್ಷೇತ್ರಗಳಲ್ಲಿ ಕರ್ನಾಟಕ ವೇಗಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಳೆಯ ಪದ್ದತಿಗಳ ಜೊತೆಗೆ ಹೊಸ ನಿಯಮಗಳ ಮೂಲಕ ಕರ್ನಾಟಕ ಯಶಸ್ಸು ಗಳಿಸುತ್ತಿದೆ. ಕರ್ನಾಟಕದ ಐಟಿ ಪಾಲಿಸಿ - 2025 ಉತ್ತಮ ಪಾಲಿಸಿಯಾಗಿದೆ. ಮಂಗಳೂರು, ಮೈಸೂರು, ತುಮಕೂರು, ಕಲಬುರಗಿ, ಉಡುಪಿ ಜಿಲ್ಲೆಗಳಲ್ಲಿ ಐಟಿ ಕ್ಲಸ್ಟರ್ ನಿರ್ಮಾಣ ಉತ್ತಮ ಬೆಳವಣಿಗೆಯಾಗಿದೆ. ಬಿಯಾಂಡ್ ಬೆಂಗಳೂರು ಅಡಿ 2ನೇ ಹಂತದ ನಗರಗಳ ಅಭಿವೃದ್ಧಿಯಾಗುತ್ತಿದೆ ಎಂದರು.
ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕವೇ ಲೀಡರ್: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಐಟಿ ರಫ್ತು, ಎಲೆಕ್ಟ್ರಾನಿಕ್ ಡಿಸೈನ್ಸ್, ಆರ್ ಅಂಡ್ ಡಿ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಉದ್ಯೋಗ ಸೃಷ್ಠಿಯಲ್ಲಿ ಭಾರತದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ಯುವ ಪ್ರತಿಭೆಗಳು ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ. ದೇಶದ ಶೇ.10ರಷ್ಟು ಉದ್ಯೋಗ ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿದೆ. ಅಮೃತಕಾಲದ ಸಮಯದಲ್ಲಿ ಕರ್ನಾಟಕ ಭಾರತದ ಅತಿದೊಡ್ಡ ಅಡಿಪಾಯವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಾಂತಾರ ಉಲ್ಲೇಖಿಸಿದ ಗೋಯೆಲ್: ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೈಗಾರಿಕಾ ಸಚಿವ ಪಿಯುಷ್ ಗೋಯಲ್, ಕನ್ನಡದಲ್ಲಿ ನಮಸ್ಕಾರ ಹೇಳಿ ಭಾಷಣ ಆರಂಭಿಸುತ್ತಾ ಕಾಂತಾರ ಸಿನಿಮಾ ಬಗ್ಗೆ ಪ್ರಸ್ತಾಪಿಸಿದರು.
ಹೂಡಿಕೆಯನ್ನು ಕಾಂತಾರ ಸಿನಿಮಾಗೆ ಹೋಲಿಕೆ ಮಾಡಿದ ಸಚಿವರು, ನಾನು ಆ ಸಿನಿಮಾ ನೋಡಿದೆ. ಚಿಕ್ಕ ಬಜೆಟ್ ಸಿನಿಮಾ. ಇದರಲ್ಲಿ ಕರ್ನಾಟಕ ಸಂಸ್ಕೃತಿಯನ್ನ ತೋರಿಸಿದ್ದಾರೆ. ನಾನು ಈ ಸಿನಿಮಾದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದೆ. ಎರಡಂಕಿ ಬಜೆಟ್ ಇಂದು 300 ಕೋಟಿಗೂ ಹೆಚ್ಚು ಅದಾಯ ಗಳಿಸಿದೆ. ಹೂಡಿಕೆ ಸಹ ಸಣ್ಣದಾಗಿ ಮಾಡಿದರೂ ದೊಡ್ಡ ಮಟ್ಟದಲ್ಲಿ ಯಶಸ್ವಿ ಮಾಡಬೇಕಿದೆ ಎಂದು ಹೂಡಿಕೆ ಸಮಾವೇಶದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಕೋವಿಡ್ ಸಮಯದಲ್ಲಿ ಕರ್ನಾಟಕ ಸರ್ಕಾರ ಉತ್ತಮ ಕೆಲಸ ಮಾಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾರ್ಡ್ ವರ್ಕಿಂಗ್ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಕೆಲಸವಾಗಿದೆ. ವಿಶ್ವದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮುಂಚೂಣಿಯಲಿದೆ ಎಂದರು.
ಮೋದಿ ನೇತೃತ್ವದಲ್ಲಿ ಭಾರತ ಇನಷ್ಟು ಏಳಿಗೆಯಾಗಲಿದೆ. ಕರ್ನಾಟಕಕ್ಕೆ ಐಟಿ ಸೆಕ್ಟರ್ ಬಂದು 25 ವರ್ಷವಾಗುತ್ತಿದೆ. ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್ ಉದ್ಯಮ ಬೆಳೆಯುತ್ತಿದೆ. 2014ರಲ್ಲಿ ನಾವು ಎಲ್ಲ ಮೊಬೈಲ್ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಶೇಕಡಾ 97ರಷ್ಟು ಮೊಬೈಲ್ ಉತ್ಪನ್ನ ಭಾರತದಲ್ಲೇ ಆಗುತ್ತಿದೆ. ಹಾಗಾಗಿ ಹೂಡಿಕೆಗೆ ಕರ್ನಾಟಕ ಉತ್ತಮ ತಾಣ ಎಂದು ಉದ್ಯಮಿಗಳನ್ನು ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು.
ಇದನ್ನೂ ಓದಿ:ಅದಾನಿ, ಜಿಂದಾಲ್ ತಲಾ ಲಕ್ಷ ಕೋಟಿ, ಸ್ಟೈರ್ಲೈಟ್ ಪವರ್ ₹50 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ