ಕರ್ನಾಟಕ

karnataka

ETV Bharat / state

ಆರ್ಥಿಕ ಮುಗ್ಗಟ್ಟಿನ ಎಫೆಕ್ಟ್:  ಜಿಎಸ್​ಟಿ ಜೊತೆಗೆ ರಾಜ್ಯದ ಪಾಲಿನ ಕೇಂದ್ರದ ಇತರ ತೆರಿಗೆ ಮೊತ್ತಕ್ಕೂ ಕತ್ತರಿ! - bangalore latest news

ದೇಶ ಕಾಣುತ್ತಿರುವ ಆರ್ಥಿಕ‌ ಸಂಕಷ್ಟದ ಬಿಸಿ ಇದೀಗ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ತಾಗುತ್ತಿದೆ. ಕೇಂದ್ರದಿಂದ ಬರಬೇಕಾದ‌ ರಾಜ್ಯದ ಪಾಲಿನ ತೆರಿಗೆ ವರ್ಗಾವಣೆಗೆ ಕತ್ತರಿ ಬೀಳುತ್ತಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

central government facing difficulties in economic condition
ಆರ್ಥಿಕ ಮುಗ್ಗಟ್ಟು ಎಫೆಕ್ಟ್:  ಜಿಎಸ್​ಟಿ ಜೊತೆಗೆ ರಾಜ್ಯದ ಪಾಲಿನ ಕೇಂದ್ರದ ಇತರೆ ತೆರಿಗೆ ಮೊತ್ತಕ್ಕೂ ಕತ್ತರಿ!

By

Published : Jan 3, 2020, 9:17 PM IST

ಬೆಂಗಳೂರು:ದೇಶ ಕಾಣುತ್ತಿರುವ ಆರ್ಥಿಕ‌ ಸಂಕಷ್ಟದ ಬಿಸಿ ಇದೀಗ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ತಾಗುತ್ತಿದೆ. ಕೇಂದ್ರದಿಂದ ಬರಬೇಕಾದ‌ ರಾಜ್ಯದ ಪಾಲಿನ ತೆರಿಗೆ ವರ್ಗಾವಣೆಗೆ ಕತ್ತರಿ ಬೀಳುತ್ತಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈಗಾಗಲೇ ರಾಜ್ಯ ಸರ್ಕಾರ ಬಜೆಟ್ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಒಂದೆಡೆ ಭೀಕರ ಪ್ರವಾಹದಿಂದ ರಾಜ್ಯದ ಬೊಕ್ಕಸಕ್ಕೆ ತೀವ್ರ ಹೊರೆಯಾಗಿದ್ದರೆ, ಇನ್ನೊಂದೆಡೆ ದೇಶ ಕಾಣುತ್ತಿರುವ ಆರ್ಥಿಕ ಮುಗ್ಗಟ್ಟು ರಾಜ್ಯ ಸರ್ಕಾರಕ್ಕೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ. ರಾಜ್ಯದ ಆರ್ಥಿಕ ಸಂಪನ್ಮೂಲದಲ್ಲಿ ಕೇಂದ್ರದ ಪಾಲು ಸಾಕಷ್ಟಿದೆ. ಕೇಂದ್ರ ಸರ್ಕಾರದಿಂದ ಬರುವ ಜಿಎಸ್​ಟಿ ಹೊರತಾಗಿನ ಇತರ ತೆರಿಗೆ ವರ್ಗಾವಣೆ ರಾಜ್ಯ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಈ ಬಾರಿ ಆರ್ಥಿಕ‌ ಮುಗ್ಗಟ್ಟಿನಿಂದ ಕೇಂದ್ರದ ರಾಜ್ಯದ ಪಾಲಿನ ತೆರಿಗೆಗೆ ಕತ್ತರಿ ಬೀಳಲಿದೆ.

ಕೇಂದ್ರದ‌ ತೆರಿಗೆ ಹಂಚಿಕೆಗೆ ಕತ್ತರಿ:

ಈಗಾಗಲೇ ಜಿಎಸ್​ಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ‌ ಹಿಂದೇಟು ಹಾಕುತ್ತಿದೆ. ಸುಮಾರು 6 ಸಾವಿರ ಕೋಟಿ ರೂ. ಜಿಎಸ್​ಟಿ ಪರಿಹಾರ ಬಾರದೆ ರಾಜ್ಯ ಬೊಕ್ಕಸಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಇದೀಗ ರಾಜ್ಯ ಸರ್ಕಾರಕ್ಕೆ‌ ಜಿಎಸ್​ಟಿ ಪರಿಹಾರ ಮೊತ್ತ ಹೊರತಾಗಿ ಈ ಬಾರಿ ಸುಮಾರು 5,000 ಕೋಟಿ ರೂ. ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಮೊತ್ತಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ. ದೇಶ ಕಾಣುತ್ತಿರುವ ಆರ್ಥಿಕ ಬಿಕ್ಕಟ್ಟಿನ‌ ಪರಿಣಾಮವಾಗಿ ರಾಜ್ಯದ ಪಾಲಿನ ಕೇಂದ್ರ ತೆರಿಗೆ ಮೊತ್ತಕ್ಕೆ ಕತ್ತರಿ ಬೀಳಲಿದೆ ಎಂದು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್ ತಿಳಿಸಿದ್ದಾರೆ.

ಒಂದೆಡೆ ಜಿಎಸ್‌ಟಿ ಪರಿಹಾರ ವಿಳಂಬ, ಇನ್ನೊಂದೆಡೆ ರಾಜ್ಯದ ಪಾಲಿನ ಕೇಂದ್ರದ ಇತರೆ ತೆರಿಗೆಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದ್ದು, ಸಂಪನ್ಮೂಲ ಕ್ರೋಢೀಕರಣ ತಲೆನೋವಾಗಿ ಪರಿಣಮಿಸಿದೆ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರದ ತೆರಿಗೆ ಮೊತ್ತದ 4.71%ನ್ನು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಬೇಕು. ಆದರೆ, ಈ‌ ಬಾರಿಯ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಆ ಮೊತ್ತದಲ್ಲಿ ಸುಮಾರು 5,000 ಕೋಟಿ ರೂ. ಕಡಿತವಾಗಲಿದೆ ಎಂದು ಕೇಂದ್ರದ ಅಧಿಕಾರಿಗಳೇ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರದ ತೆರಿಗೆ ಹಂಚಿಕೆಯ ಅಂಕಿ-ಅಂಶ:

ಕೇಂದ್ರ ಸರ್ಕಾರದ ತೆರಿಗೆಗಳ ರಾಜ್ಯದ ಪಾಲಿನ ವರ್ಗಾವಣೆಗಳು(ಹಂಚಿಕೆ) 2019-20ರ ಮೊದಲ ಆರು ತಿಂಗಳಲ್ಲಿ 14,668 ಕೋಟಿ ರೂ. ಆಗಿದೆ. ಇದು 39,806 ಕೋಟಿ ರೂ.ಗಳ ಬಜೆಟ್ ಅಂದಾಜಿನ ಶೇ.36.8ರಷ್ಟಿದೆ. 2018-19ರ ಮೊದಲಾರ್ಧದಲ್ಲಿ ರಾಜ್ಯದ ಪಾಲಿನ ಕೇಂದ್ರದ ವರ್ಗಾವಣೆಗಳು ಶೇ.41.7ರಷ್ಟಿತ್ತು.

ಇನ್ನು ಕೇಂದ್ರ ಸರ್ಕಾರ ಚುನಾವಣೆ ಬಳಿಕೆ ಜುಲೈ 5ರಂದು ಮಂಡಿಸಿದ ಆಯವ್ಯಯದಲ್ಲಿ ಕೇಂದ್ರ ತೆರಿಗೆಗಳ ರಾಜ್ಯದ ಪಾಲಿನ ಹಂಚಿಕೆಯನ್ನು 38,134 ಕೋಟಿ ರೂ. ಗಳೆಂದು ಪರಿಷ್ಕರಿಸಿದೆ‌. ಇದು ಕೇಂದ್ರ ಸರ್ಕಾರ ಚುನಾವಣೆ ಮುನ್ನ ಅಂದರೆ ಫೆಬ್ರವರಿಯಲ್ಲಿ ಮಂಡಿಸಿದ ಆಯವ್ಯಯಕ್ಕಿಂತ 1,672 ಕೋಟಿ ರೂ. ಮೊತ್ತದಷ್ಟು ಕಡಿಮೆಯಾಗಿದೆ.

ABOUT THE AUTHOR

...view details