ಬೆಂಗಳೂರು: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್, ಇದೊಂದು ತುಘಲಕ್ ಸರ್ಕಾರ ಎಂದು ಆಪಾದಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟ ಬೆಂಬಲಿಸಿ ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲೂ ಕೃಷಿ ಕಾಯ್ದೆ ವಿಚಾರವನ್ನು ಪ್ರಸ್ತಾಪಿಸುತ್ತಿವೆ. ಆದರೆ, ತುಘಲಕ್ ಕೇಂದ್ರ ಸರ್ಕಾರ ಮಾತ್ರ ನೆಪಕಷ್ಟೇ ಚರ್ಚೆಗೆ ಅವಕಾಶ ನೀಡಿದ್ದು, ವಿವಾದಿತ ಕೃಷಿ ಕಾಯ್ದೆಗಳ ಕುರಿತು ತನ್ನ ನಿಲುವನ್ನು ತಿಳಿಸುತ್ತಿಲ್ಲ ಎಂದು ದೂರಿದ್ದಾರೆ.
ಸದನದ ಹೆಸರಲ್ಲಿ ಜನರ ಹಣ ಖರ್ಚಾಗುತ್ತಿದೆಯೇ ಹೊರೆತು ಕೇಂದ್ರ ಸರ್ಕಾರ ಮಾತ್ರ ಕೃಷಿ ಕಾಯ್ದೆ ಬಗ್ಗೆ ತನ್ನ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ತನ್ನ ಸ್ವಪ್ರತಿಷ್ಠೆಗಾಗಿ ರೈತರು ಹಾಗೂ ಸದನದ ಸಮಯವನ್ನು ವ್ಯರ್ಥ ಮಾಡುತ್ತಿದೆ. ಸ್ವಪ್ರತಿಷ್ಟೆ ಹಾಗೂ ಮೊಂಡು ಧೋರಣೆಗೆ ಜೋತು ಬಿದ್ದಿರುವ ಕೇಂದ್ರ ಸರ್ಕಾರ, ದೇಶಕ್ಕೆ ಅನ್ನ ಬೆಳೆಯುವ ಅನ್ನದಾತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಎಸ್ಆರ್ ಪಾಟೀಲ್ ರೈತರ ಪರ ತಮ್ಮ ಬೆಂಬಲ ವ್ಯಕ್ತಪಡಿಸುವಂತೆ ದೇಶಾದ್ಯಂತ ಇರುವ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ:ಸಕ್ಕರೆ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡಿರುವುದು ಕಂಡುಬಂದರೆ ಸೂಕ್ತ ಕ್ರಮ: ಸಚಿವ ಎಂಟಿಬಿ ನಾಗರಾಜ್