ಬೆಂಗಳೂರು: ರಾಜ್ಯದ ನೆರೆ ಸಮಸ್ಯೆಗೆ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿರುವುದಕ್ಕೆ ನಾವು ರಾಜ್ಯದ ಜನರ ಕ್ಷಮೆ ಕೋರುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ನ ತಮ್ಮ ಅಧಿಕೃತ ವಸತಿಗೃಹದಲ್ಲಿಂದು ಬೆಳಗ್ಗೆ ಪೂಜೆ ಸಲ್ಲಿಸಿ ಗೃಹ ಪ್ರವೇಶ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರದ ಹಣ ಬರುವುದು ತಡವಾಗಿದೆ. ಅದನ್ನು ನಾವು ಒಪ್ಪಲೇಬೇಕು. ಇದುವರೆಗೂ ಎಲ್ಲ ವಿಧದ ಪರಿಹಾರ ಧನವೂ ತುರ್ತಾಗಿ ಬರುತ್ತಿತ್ತು. ಈ ಬಾರಿ ಪರಿಹಾರ ಧನ ಬರುವಲ್ಲಿ ವಿಳಂಬವಾಗಿರುವುದಕ್ಕೆ ಮೊತ್ತ ದೊಡ್ಡದಾಗಿರುವುದು ಕೂಡ ಕಾರಣ ಎಂದು ಅಭಿಪ್ರಾಯಪಟ್ಟರು.
ಸರಿ ಸುಮಾರು 39 ಸಾವಿರ ಕೋಟಿ ಮೊತ್ತದ ಪರಿಹಾರ ಧನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಈ ಮೊತ್ತದ ಅಂದಾಜು ಹಾಗೂ ಪರಿಶೀಲನೆಯನ್ನು ಕೇಂದ್ರ ಸರ್ಕಾರ ನಡೆಸಿದ್ದು, ಆದಷ್ಟು ಬೇಗ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ. ನಿರೀಕ್ಷೆಗೂ ಮೀರಿದ ವಿಳಂಬವಾಗಿರುವುದಕ್ಕೆ ನಾವು ಜನರ ಕ್ಷಮೆ ಕೋರುತ್ತೇವೆ ಎಂದರು.