ಬೆಂಗಳೂರು :ಫೆಬ್ರುವರಿ 1(ಸೋಮವಾರ) ಕೇಂದ್ರದ ಬಜೆಟ್ ಮಂಡನೆಯಾಗಲಿದೆ. ರಾಜ್ಯ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಕೋವಿಡ್ನಿಂದಾಗಿ ಈ ಬಾರಿ ದೇಶದ ಆರ್ಥಿಕತೆಯೇ ಬುಡಮೇಲಾಗಿರುವ ಇಂತಹ ಸಂದರ್ಭದಲ್ಲಿ ಎಲ್ಲ ವಲಯಗಳಲ್ಲೂ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಜನಪ್ರಿಯ ಘೋಷಣೆಗಳು ಈ ಬಾರಿಯ ಬಜೆಟ್ನಲ್ಲಿ ಇರಲಿದೆಯೇ? ಅಥವಾ ಹಳೆಯ ಘೋಷಣೆಗಳಿಗೆ ಹೆಚ್ಚುವರಿ ಹಣ ಬಿಡುಗಡೆಯಾಗಲಿದ್ಯಾ ಎಂಬ ಕುತೂಹಲ ಮೂಡಿದೆ.
ಈ ಬಾರಿಯ ನಿರೀಕ್ಷೆಗಳೇನು?:15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಘೋಷಿಸಿದ 5,495 ಕೋಟಿ ರೂ. ವಿಶೇಷ ಅನುದಾನ ಸೇರಿ ಎಲ್ಲಾ ಬಾಕಿ ಮುಕ್ತಿಗಳಿಸಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚುವರಿ ಅನುದಾನ ನೀಡುವಂತೆಯೂ ರಾಜ್ಯ ಸರ್ಕಾರ ಮನವಿ ಮಾಡಿದೆ.
ಹೊಸ ಸಿಎಸ್ಎಸ್ ಯೋಜನೆ ಪರಿಚಯಿಸುವ ಸಂದರ್ಭದಲ್ಲಿ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು. ಇಲ್ಲದಿದ್ದರೇ ರಾಜ್ಯ ಹಣಕಾಸಿನ ಮೇಲೆ ಹೊರೆ ಬೀಳಲಿದೆ. ಬಜೆಟ್ನಲ್ಲಿ ರೂಪಿಸಲಾದ ಯೋಜನಾ ವಿನಿಯೋಗದ ಪ್ರಕಾರ ಕೇಂದ್ರ ಸರ್ಕಾರ ಸಿಎಸ್ಎಸ್ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಯೋಜನೆ ವಿನಿಯೋಗಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಉಂಟಾಗುತ್ತದೆ. ಹೀಗಾಗಿ, ರಾಜ್ಯ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದೆ.
ಮೆಟ್ರೋ ರೈಲು, ಉಪನಗರ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಅನುದಾನ ನೀಡಬಹುದು ಎಂಬ ನಿರೀಕ್ಷೆ ರಾಜ್ಯ ಇಟ್ಟುಕೊಂಡಿದೆ.