ಬೆಂಗಳೂರು : ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಲು ಅವಧಿಪೂರ್ವ ವರ್ಗವಣೆ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ವಿವಾದವನ್ನು ಸಕ್ಷಮ ಪ್ರಾಧಿಕಾರಕ್ಕೆ ಹಿಂದಿರುಗಿಸಿದೆ.
ಅಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿ ಆಲಿಸಿ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿರುವ ಸಿಎಟಿ ಈ ಆದೇಶ ನೀಡಿದೆ. ನಾಗರಿಕ ಸೇವಾ ಮಂಡಳಿ ಶಿಫಾರಸ್ಸಿನಂತೆ ಸಕ್ಷಮ ಪ್ರಾಧಿಕಾರ 2020ರ ಸೆ.28ರಂದು ಹೊರಡಿಸಿರುವ ವರ್ಗಾವಣೆ ಆದೇಶವನ್ನು ಮರು ಪರಿಶೀಲಿಸಬೇಕು. ಮುಂದಿನ ಒಂದು ತಿಂಗಳ ಒಳಗೆ ಅರ್ಜಿದಾರರ ವಾದ ಆಲಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಸಿಎಟಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಮೈಸೂರು ಜಿಲ್ಲಾಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ಬಿ. ಶರತ್ ಅವರನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿತ್ತು. 2020ರ ಆ.29ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ. ಶರತ್ ಅವರನ್ನು ಸೆ.27ರಂದು, ಅಂದರೆ ಒಂದು ತಿಂಗಳು ತುಂಬುವ ಮುನ್ನವೇ ಹುದ್ದೆಯಿಂದ ತೆರವುಗೊಳಿಸಿತ್ತು.
ಸರ್ಕಾರದ ಈ ಕ್ರಮ ಆಕ್ಷೇಪಿಸಿದ್ದ ಬಿ. ಶರತ್ ಅಕ್ಟೋಬರ್ ಮೊದಲ ವಾರದಲ್ಲಿ ಸಿಎಟಿ ಮೆಟ್ಟಿಲೇರಿದ್ದರು. ಸೇವಾ ನಿಯಮಗಳನ್ನು ಉಲ್ಲಂಘಿಸಿ 2 ವರ್ಷ ತುಂಬುವ ಮೊದಲೇ ತನ್ನನ್ನು ವರ್ಗಾವಣೆ ಮಾಡಿರುವ ಸರಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಲ್ಲಿಂದ ಹಿಡಿದು ವಾದ ಮಂಡನೆವರೆಗೂ ವಿಳಂಬ ಧೋರಣೆ ಅನುಸರಿಸಿದ್ದ ಸರ್ಕಾರ ಅಂತಿಮವಾಗಿ ಬಿ. ಶರತ್ ಅವರನ್ನು ರೇಷ್ಮೆ ಮಾರುಕಟ್ಟೆ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿತ್ತು.
ಅಲ್ಲದೇ, ಶರತ್ ಅನಾರೋಗ್ಯ ಕಾರಣ ನೀಡಿ ಮಂಡಳಿ ವ್ಯವಸ್ಥಾಪಕ ಹುದ್ದೆ ಅಧಿಕಾರ ಸ್ವೀಕರಿಸದೆ ಉಳಿದಿದ್ದಾರೆ. ಇಂತಹ ಅನಾರೋಗ್ಯಪೀಡಿತ ಅಧಿಕಾರಿಯನ್ನು ಮೈಸೂರು ಡಿಸಿ ಹುದ್ದೆಗೆ ನಿಯೋಜಿಸಲು ಸಾಧ್ಯವಿಲ್ಲ ಎಂದು ತನ್ನ ನಿಲುವು ತಿಳಿಸಿತ್ತು.
ಮತ್ತೊಂದೆಡೆ ಡಿ.22ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಸಿಎಟಿ ತೀರ್ಪನ್ನು ಕಾಯ್ದಿರಿಸಿದ್ದರೂ ಪ್ರಕಟಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಯಮಾನುಸಾರ 3 ವಾರಗಳಲ್ಲಿ ತೀರ್ಪು ಪ್ರಕಟಿಸಬೇಕಿದ್ದರೂ ಸಿಎಟಿ ನಿಯಮ ಪಾಲಿಸಿಲ್ಲ ಎಂದು ಬಿ.ಶರತ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ 2 ವಾರಗಳಲ್ಲಿ ತೀರ್ಪು ಪ್ರಕಟಿಸುವಂತೆ ಅಪ್ಪಣೆ ಮಾಡಿದ ಹಿನ್ನೆಲೆಯಲ್ಲಿ ಇದೀಗ ಸಿಎಟಿ ತೀರ್ಪು ಪ್ರಕಟಿಸಿದೆ.