ಬೆಂಗಳೂರು:ರಾಜ್ಯದಲ್ಲಿ ಮಳೆಯಿಂದ ಉಂಟಾದ ನೆರೆ ಹಾನಿ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದ ತಂಡ ಸೆಪ್ಟಂಬರ್ 7 ರಂದು ರಾಜ್ಯಕ್ಕೆ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್ ನೇತೃತ್ವದ 6 ಜನರ ತಂಡ ರಾಜ್ಯಕ್ಕೆ ಸೆ. 7 ರಂದು ಆಗಮಿಸಲಿದ್ದು, ಅಂದು ಮುಖ್ಯಮಂತ್ರಿಗಳ ಜೊತೆ ಮೊದಲ ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಿದರು.
ಸೆಪ್ಟೆಂಬರ್ 8 ರಂದು ಪ್ರವಾಹಪೀಡಿತ ಜಿಲ್ಲೆಗಳಾದ ಕೊಡಗು, ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ, ಕೇಂದ್ರದ ತಂಡ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಮನವಿ ಮಾಡಿ, ಅಧ್ಯಯನ ತಂಡವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ತಂಡ 7ರಂದು ಆಗಮಿಸುತ್ತಿದ್ದು, 8ರಂದು ಸಮೀಕ್ಷೆ ನಡೆಸಲಿದೆ. ಬಳಿಕ ಸೆ. 9 ರಂದು ಕೇಂದ್ರ ತಂಡದೊಂದಿಗೆ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರವಾಹದಿಂದ ಆಗಿರುವ ಹಾನಿ ಕುರಿತು ಮಾಹಿತಿ ನೀಡಿ ಪರಿಹಾರದ ಬಗ್ಗೆ ಚರ್ಚಿಸಲಾಗುವುದು. ಸುಮಾರು 4, 800 ಕೋಟಿ ರೂ. ಪರಿಹಾರ ಕೇಳಲಾಗುವುದು ಎಂದು ಹೇಳಿದರು.